ಎಚ್.ಡಿ.ಕೋಟೆ:
ತಂಬಾಕಿಗೆ ವೈಜ್ಞಾನಿಕ ಬೆಲೆ ನೀಡಬೇಕು, ಇಲ್ಲದಿದ್ದರೆ ಸೋಮವಾರ ಪ್ರಾರಂಭವಾಗುವ ಹರಾಜು ಪ್ರಕ್ರಿಯೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ತಂಬಾಕು ಬೆಳೆಗಾರರು ಅಧಿಕಾರಿಗಳನ್ನು ಎಚ್ಚರಿಸಿದರು.
ಪಟ್ಟಣದ ಬಾಪೂಜಿ ಸರ್ಕಲ್ನಿಂದ ಶಾಂತಿಪುರ(ಹೆಬ್ಬಳ್ಳ) ಗ್ರಾಮದಲ್ಲಿರುವ ತಂಬಾಕು ಮಾರುಕಟ್ಟೆ ಮಂಡಳಿವರೆಗೆ ರೈತರು ಎತ್ತಿನಗಾಡಿ, ಟ್ರ್ಯಾಕ್ಟರ್ ಮೂಲಕ ಮೆರವಣಿಗೆ ನಡೆಸಿ ತಂಬಾಕು ರೈತರಿಗೆ ನ್ಯಾಯ ದೊರಕಿಸುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ರೈತ ಮುಖಂಡ ಮೊತ್ತ ಬಸವರಾಜಪ್ಪ ಮಾತನಾಡಿ, 45 ವರ್ಷಗಳಿಂದ ತಂಬಾಕು ಬೆಳೆಯುತ್ತಿದ್ದು ಅಲ್ಲಿಂದ ಇಲ್ಲಿಯವರೆಗೆ ನಮಗೆ ಸೂಕ್ತ ಬೆಲೆ ಸಿಗದೆ ಅತಂತ್ರವಾಗಿದ್ದೇವೆ. ತಂಬಾಕು ರೈತರು ಪ್ರತಿವರ್ಷ ಬೆಳೆಗೆ ಮಾಡಿದ ಖರ್ಚು ತೆಗೆಯಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬ್ಯಾಂಕಿನಲ್ಲಿ ಮಾಡಿದ ಸಾಲ ತೀರಿಸಲಾಗದೆ ಕಂಗಾಲಾಗಿದ್ದಾರೆ. ಮಂಡಳಿ ಅಧಿಕಾರಿಗಳು ರೈತ ವಿರೋಧಿ ನೀತಿ ಅನುಸರಿಸಿ ತಂಬಾಕು ಖರೀದಿದಾರರ ಜತೆ ಒಪ್ಪಂದ ಮಾಡಿಕೊಂಡು ನಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.
ಮತ್ತೊಬ್ಬ ಮುಖಂಡ ಬಿ.ವಿ.ಬಸವರಾಜು ಮಾತನಾಡಿ, ರಾಜ್ಯದಲ್ಲಿ 65 ಸಾವಿರ ಹಾಗೂ ತಾಲೂಕಿನಲ್ಲಿ 4.5 ಸಾವಿರ ಬೆಳೆಗಾರರು ಇದ್ದು, ತಾಲೂಕಿನಲ್ಲಿ ಒಟ್ಟು 7.5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೊಗೆಸೊಪ್ಪು ಬೆಳೆಯುತ್ತಿದ್ದೇವೆ. ತಂಬಾಕು ಮಂಡಳಿ ವತಿಯಿಂದ 9 ಮಿಲಿಯನ್ ಹೊಗೆಸೊಪ್ಪು ಬೆಳೆಯಲು ಅವಕಾಶ ಇದೆ. ಆದರೆ ಹವಾಮಾನ ವೈಪರೀತ್ಯದಿಂದಾಗಿ ಈ ವರ್ಷ ಅಷ್ಟು ಹೊಗೆಸೊಪ್ಪು ಬೆಳೆಯಲು ಸಾಧ್ಯವಾಗುತ್ತಿಲ್ಲ. ವರ್ಷ ವರ್ಷ ತಂಬಾಕು ಬೆಳೆ ಕಡಿಮೆ ಆಗುತ್ತಿದೆ. ಕಾರಣ ಸರಿಯಾದ ದರ ಸಿಗದೆ ಇರುವುದರಿಂದ ಬಹುತೇಕ ರೈತರು ಹೊಗೆಸೊಪ್ಪು ಬೆಳೆಯುವುದನ್ನು ಕಡಿಮೆ ಮಾಡಿದ್ದಾರೆ ಎಂದರು.
ಉತ್ತಮ ದರ್ಜೆಯ ಹೊಗೆಸೊಪ್ಪಿಗೆ ರಾಜ್ಯದಲ್ಲಿ ಉತ್ತಮ ದರ ಸಿಗುತ್ತಿಲ್ಲ. ಕಳೆದ ವರ್ಷ ರಾಜ್ಯದ ಬೆಳೆಗಾರರಿಗೆ ಒಂದು ಕೆಜಿ ಹೊಗೆಸೊಪ್ಪಿಗೆ ಸರಾಸರಿ 165 ರೂ. ದರ ಸಿಕ್ಕಿದ್ದರೆ ಅದೇ ಆಂಧ್ರಪ್ರದೇಶದಲ್ಲಿ 198 ರೂ. ಸಿಕಿದೆ. ಇದು ಕೇಂದ್ರ ಹಾಗೂ ತಂಬಾಕು ಮಂಡಳಿಯ ತಾರತಮ್ಯ. ಇದರಿಂದ ರಾಜ್ಯದ ತಂಬಾಕು ಬೆಳೆಗಾರರಿಗೆ ಮಂಡಳಿ ವತಿಯಿಂದ 35 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ದೂರಿದರು.
ಎಚ್.ಸಿ.ಶಿವಣ್ಣ ಮಾತನಾಡಿ, 2020-21ನೇ ಸಾಲಿನಲ್ಲಿ ಪ್ರತಿ ಕೆಜಿ ತಂಬಾಕು ಬೆಳೆಯಲು 150 ರೂ ಖರ್ಚಾಗಿದ್ದು, ಮಾರಾಟದಿಂದ ಸರಾಸರಿ 119.89 ರೂ.ಗಳು ಮಾತ್ರ ದೊರಕಿರುತ್ತದೆ. 2021-22 ನೇ ಸಾಲಿನಲ್ಲಿ ಪ್ರತಿ ಕೆಜಿ ತಂಬಾಕು ಬೆಳೆಯಲು 160 ರೂ. ಖರ್ಚಾಗಿದ್ದು, ಮಾರಾಟದಿಂದ 163.11 ರೂ. ಗಳು ಸರಾಸರಿ ಬೆಲೆ ದೊರಕಿ ತಂಬಾಕು ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಬಾರಿ ಗೊಬ್ಬರದ ಬೆಲೆ ಶೇ. 65 ಏರಿಕೆಯಾಗಿದೆ. ಸಕ್ಕರ್‌ಔಟ್ ಬೆಲೆ ಶೇ.38 ಏರಿಕೆಯಾಗಿದೆ. ಆದ್ದರಿಂದ ಈ ವರ್ಷ ಪ್ರತಿ ಕೆಜಿ ತಂಬಾಕು ಬೆಳೆಯಲು ರೈತರಿಗೆ 180 ರೂ. ಖರ್ಚಾಗಿರುತ್ತದೆ ಎಂದರು.
2022-23 ನೇ ಸಾಲಿಗೆ 250 ರೂ. ಸರಾಸರಿ ಬೆಲೆ ಸಿಕ್ಕರೆ ಮಾತ್ರ ತಂಬಾಕು ರೈತರು ಉಳಿಯಲು ಸಾಧ್ಯ. ಹಾಗಾಗಿ, ಸೋಮವಾರ ಪ್ರಾರಂಭ ಆಗುವ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ದರ ಸಿಗದೆ ಇದ್ದರೆ ಹರಾಜು ಪ್ರಕ್ರಿಯೆ ನಿಲ್ಲಿಸಿ ಪ್ರತಿಭಟಿಸಲಾಗುತ್ತದೆ ಎಂದು ಎಚ್ಚರಿಸಿದರು.
ನಂತರ ತಂಬಾಕು ಹರಾಜು ಅಧೀಕ್ಷಕ ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ತಂಬಾಕು ರೈತರಾದ ಗದ್ದೇಹುಂಡಿ ಗುಣಪಾಲ್, ಕೆ.ವಿ.ಮಹದೇವಸ್ವಾಮಿ, ಹೆಗ್ಗುಡಿಲು ಮಹಾದೇವ, ವಿಶ್ವ ಮೇಟಿಕುಪ್ಪೆ, ನಾಗರಾಜು, ಎನ್‌ಎನ್ ಹಳ್ಳಿ ಗುರುಸ್ವಾಮಿ, ಸತೀಶ್ ಬಹಾದೂರ್, ಪೃಥ್ವಿ, ಚನ್ನಪ್ಪ ಭೀಮನಹಳ್ಳಿ, ಕುಮಾರ್ ಹೊಸಹಳ್ಳಿ, ಚನ್ನಪ್ಪ ಮೇಟಿಕುಪ್ಪೆ, ನಾಗೇಂದ್ರ, ಚಂದ್ರು ಅಣ್ಣೂರು, ನಂಜನಾಯಕನಹಳ್ಳಿ ವೆಂಕಟೇಗೌಡ ಇದ್ದರು.