ನ್ಯೂಸ್

ತಂದೆಯ‌ ಬಂದೂಕಿನಿಂದ ಕಾಡುಪ್ರಾಣಿಗಳ ಬೇಟೆಯಾಡ್ತಿದ್ದ..!

ಬೆಂಗಳೂರು: ಕಾಡು ಪ್ರಾಣಿಗಳನ್ನು ಬೇಟೆಯಾಗಿ ಮಾಂಸ, ಕೊಂಬು, ಚರ್ಮ ಮಾರುತ್ತಿದ್ದ ಆರೋಪಿಯನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.
ಕನಕಪುರದ ಕೋಣಾಳದೊಡ್ಡಿಯ ಮಲ್ಲೇಶ್ (50) ಬಂಧಿತ. ಆರೋಪಿಯಿಂದ 5 ಜಿಂಕೆಯ ಕೊಂಬು, 1 ಆನೆಯ ದಂತ ಹಾಗೂ 1 ನಾಡ ಬಂದೂಕು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನಕಪುರದ ಕೋಣಾಳದೊಡ್ಡಿಯಲ್ಲಿ ಮಲ್ಲೇಶ್ ಕೃಷಿ ಚಟುವಟಿಕೆ ಮಾಡಿಕೊಂಡಿದ್ದ. ಆರೋಪಿಗೆ ಲಾಕ್‌ಡೌನ್‌ನಿಂದಾಗಿ ಆರ್ಥಿಕ ತೊಂದರೆ ಉಂಟಾಗಿತ್ತು. ಕಾಡು ಪ್ರಾಣಿಗಳ ಮಾಂಸ, ಕೊಂಬು ಹಾಗು ಚರ್ಮಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದು ಗೊತ್ತಿತ್ತು. ಬೇಟೆಯಾಡಿ ಮಾರಾಟ ಮಾಡಿದರೆ ಹಣ ಸಂಪಾದನೆ ಮಾಡಬಹುದು ಎಂದು ಯೋಚಿಸಿದ್ದ. ತನ್ನ ತಂದೆ ಬಳಸುತ್ತಿದ್ದ ನಾಡ ಬಂದೂಕನ್ನು ತೆಗೆದುಕೊಂಡು, ವಾರಕ್ಕೊಮ್ಮೆ ಕಾಡಿಗೆ ಹೋಗಿ ಪ್ರಾಣಿಗಳನ್ನು ಭೇಟೆಯಾಡುತ್ತಿದ್ದ.

ಕೆಲ ವಾರಗಳ ಹಿಂದೆಯಷ್ಟೇ ರಾಮನಗರದ ಬಿಳಿಕಲ್ಲು ಬೆಟ್ಟಕ್ಕೆ ಹೋಗಿ 5 ಜಿಂಕೆಗಳನ್ನು ಬೇಟೆಯಾಡಿದ್ದ. ಅದರ ಮಾಂಸ ಹಾಗೂ ಚರ್ಮವನ್ನು ತಮಿಳುನಾಡಿನ ಜನರಿಗೆ ಮಾರಾಟ ಮಾಡಿದ್ದ. ಕೊಂಬುಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದ. ಇತ್ತೀಚೆಗೆ ಬೇಟೆಗೆ ಹೋದಾಗ ಆನೆ ದಂತವೊಂದು ಸಿಕ್ಕಿತ್ತು. ಅವುಗಳನ್ನು ಮಾರಾಟ ಮಾಡಲು ಶನಿವಾರ ಬೆಳಗ್ಗೆ ನಗರಕ್ಕೆ ಬಂದಿದ್ದ. ಬನಶಂಕರಿ 3ನೇ ಹಂತದ ಬಸ್ ನಿಲ್ದಾಣ ಬಳಿ ಗೋಣಿ ಚೀಲ ಹಿಡಿದುಕೊಂಡು ಅನುಮಾನಸ್ಪದವಾಗಿ ಓಡಾಡುತ್ತಿದ್ದ. ಗಸ್ತಿನಲ್ಲಿದ್ದ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿ ಬಿದ್ದಿದ್ದಾನೆ. ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.