ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘಟನೆ ವತಿಂದ ಬುಧವಾರ ನಂಜನಗೂಡಿನಲ್ಲಿ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. 
ನ್ಯೂಸ್

ತ.ನಾಡಿಗೆ ನೀರು ಹರಿಸಲು ವಿರೋಧ

ಮೈಸೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘಟನೆಯಿಂದ ಬುಧವಾರ ನಂಜನಗೂಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.

ಮಧ್ಯಾಹ್ನ ಮೈಸೂರು ನಂಜನಗೂಡು ಮುಖ್ಯರಸ್ತೆಯ ಅಪೊಲೋ ವೃತ್ತದ ಬಳಿ ಸೇರಿದ ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿ ವಾಹನ ಸಂಚಾರಕ್ಕೆ ತಡೆಯೊಡ್ಡುವ ಮೂಲಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಡ್ಯ ರವಿ ಮಾತನಾಡಿ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರಾಜ್ಯದ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಅಧಿಕಾರಕ್ಕೆ ಬರುವ ಮುನ್ನ ಮೇಕೆದಾಟು ಯೋಜನೆ ಜಾರಿಗೆ ಪಾದಯಾತ್ರೆ ನಡೆಸಿದ್ದ ಡಿ.ಕೆ.ಶಿವಕುಮಾರ್ ಅವರು ಸಚಿವರಾದ ಬಳಿಕ ಯೋಜನೆ ಜಾರಿಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ರೈತರ ಹಿತ ಕಾಪಾಡಲು ತಕ್ಷಣ ತಮಿಳುನಾಡಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು. ಜತೆಗೆ, ಅಣೆಕಟ್ಟೆಯಲ್ಲಿ ಉಳಿದಿರುವ ನೀರನ್ನು ಜನ, ಜಾನುವಾರುಗಳಿಗೆ ಮತ್ತು ಬೆಂಗಳೂರು ಹಾಗೂ ಮೈಸೂರು ನಗರವಾಸಿಗಳ ಕುಡಿಯುವ ನೀರಿನ ಬಳಕೆಗೆ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕಾಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆರೆಹುಂಡಿ ರಾಜಣ್ಣ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಮಲಮ್ಮ, ಅಮ್ ಆದ್ಮಿ ಪಕ್ಷದ ತಾಲೂಕು ಅಧ್ಯಕ್ಷ ವೀರೇಶ್ ಕುಮಾರ್, ಹನುಮಯ್ಯ, ಕಬ್ಬು ಬೆಳೆಗಾರರ ಸಂಘದ ಅಂಬಳೆ ಮಂಜುನಾಥ್, ಮಹದೇವಸ್ವಾಮಿ, ಕೆರೆಹುಂಡಿ ಶಿವಣ್ಣ, ಕಸುವಿನಹಳ್ಳಿ ಮಂಜೇಶ್, ದೇವನೂರು ವಿಜೇಂದ್ರ, ನಾಗೇಂದ್ರ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.