ನ್ಯೂಸ್

ಡೆಸ್ಟಿನಿ ವಿಶೇಷ ಕಾರ್ಯಕ್ರಮ 21ರಿಂದ 24ರವರೆಗೂ

ಚಿತ್ರದುರ್ಗ: ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ 40 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಡೆಸ್ಟಿನಿ ಹೆಸರಿನಡಿ ಡಿ. 21ರಿಂದ 24ರವರೆಗೂ ಸಾರ್ಥಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೊಳಲ್ಕೆರೆ ಶಾಸಕ, ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ ಡಾ.ಎಂ.ಚಂದ್ರಪ್ಪ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 21ರಂದು ಸಂಜೆ 5.30ಕ್ಕೆ ಉದ್ಘಾಟಿಸುವರು. ಚಿಕ್ಕಮಗಳೂರಿನ ಗೌರಿಗದ್ದೆ ಅವಧೂತ ಆಶ್ರಮದ ವಿನಯ್ ಗುರೂಜಿ ಸಾನಿಧ್ಯ ವಹಿಸುವರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಸಿಇಒ ಎಂ.ಸಿ.ರಘುಚಂದನ್, ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಡಿಡಿಪಿಐ ರವಿಶಂಕರ್‌ರೆಡ್ಡಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಶಿಕ್ಷಣ ಸಂಸ್ಥೆ ಮೂಲಕ ನೂರಾರು ಕೋಟಿ ರೂ. ಹಣ ಗಳಿಕೆಯ ದುರುದ್ದೇಶ ನನಗಿಲ್ಲ. ಬಡ, ಮಧ್ಯಮ ಹಾಗೂ ಎಲ್ಲಾ ವರ್ಗದವರು ಅವರವರ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಶುಲ್ಕ ಪಾವತಿಸುತ್ತಿದ್ದಾರೆ. ಇಷ್ಟೇ ಕಟ್ಟಬೇಕೆಂದು ಯಾರ ಮೇಲೂ ಒತ್ತಡ ಹೇರಿಲ್ಲ. ಬಡವರ ಕಷ್ಟ ಅರಿತಿದ್ದು, ಕೈಲಾದಷ್ಟು ಸಹಾಯ ಮಾಡುವ ಮನೋಭಾವ ಮೊದಲಿನಿಂದಲೂ ರೂಢಿಸಿಕೊಂಡಿದ್ದೇನೆ ಎಂದು ತಿಳಿಸಿದರು.

ನಿತ್ಯ 22 ಸಾವಿರ ಮಂದಿ ಸಂಚರಿಸುವ ಚಳ್ಳಕೆರೆ ವೃತ್ತದ ಸಮೀಪ ಶಾಲಾ-ಕಾಲೇಜು ಕಟ್ಟಡ ನಿರ್ಮಿಸಿರುವ ಹೆಗ್ಗಳಿಕೆ ನಮ್ಮದಾಗಿದೆ. 1983ರಲ್ಲಿ ಸಂಸ್ಥೆ ಆರಂಭಿಸಿದ್ದು, ಈವರೆಗೂ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ, ಶಿಕ್ಷಕರ ತರಬೇತಿ, ನರ್ಸಿಂಗ್, ಫಾರ್ಮಸಿ ಹಾಗೂ ಆಯುರ್ವೇದ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗಿದೆ. ಶಾಲಾ ಹಂತದಲ್ಲಿ ರಾಜ್ಯ ಮತ್ತು ಸಿಬಿಎಸ್‌ಸಿ ಪಠ್ಯಕ್ರಮಕ್ಕೂ ಒತ್ತು ನೀಡಲಾಗಿದೆ ಎಂದು ವಿವರಿಸಿದರು.

ಇಡೀ ನಮ್ಮ ಸಂಸ್ಥೆಯಲ್ಲಿ 5 ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 550ರಿಂದ 600 ಮಂದಿಗೆ ಉದ್ಯೋಗ ಕಲ್ಪಿಸಿದ್ದೇವೆ. ಪಾಲಕರು ಪಾವತಿಸುವ ಶುಲ್ಕ ಉದ್ಯೋಗಿಗಳ ವೇತನ ಭರಿಸಲು ಆದರೆ ಸಾಕು ಎಂಬ ಭಾವನೆ ನಮ್ಮದು. ಬಿ.ಎಡ್ ಕಾಲೇಜು ಆರಂಭದಿಂದ ಈವರೆಗೂ 4-5 ಸಾವಿರ ಶಿಕ್ಷಕರನ್ನು ತಯಾರು ಮಾಡಿದ್ದೇವೆ ಎಂದರು.

ಬೆಂಗಳೂರಲ್ಲಿ ಒಳ್ಳೆಯ ಜಾಗ ಸಿಕ್ಕರೂ ಶಿಕ್ಷಣ ಸಂಸ್ಥೆ ಏನಿದ್ದರೂ ನಮ್ಮ ಊರಲ್ಲೇ ಆಗಬೇಕೆಂದು ಸ್ಥಾಪಿಸಿದೆವು. ಗುಣಮಟ್ಟಕ್ಕೆ ಆದ್ಯತೆ ನೀಡಿದ್ದು, ಜ್ಞಾನಾರ್ಜನೆ ನೀಡುವುದನ್ನು ಸಾಮಾಜಿಕ ಸೇವೆಯಾಗಿ ಪರಿಗಣಿಸಿ ಮುನ್ನಡೆಸುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳು ಪ್ರಾದೇಶಿಕ, ರಾಜ್ಯ, ರಾಷ್ಟ್ರಮಟ್ಟದಲ್ಲಿ ರ‌್ಯಾಂಕ್ ಗಳಿಸಿ ಕೀರ್ತಿ ತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೈವಿಧ್ಯಮಯ ಕಾರ್ಯಕ್ರಮ: ಸಂಸ್ಥೆಯ ಸಿಇಒ ರಘುಚಂದನ್ ಮಾತನಾಡಿ, ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡೆ ಸೇರಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಸ್ಥೆ ಮತ್ತು ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು. 21ರಂದು ಹಾಸ್ಯ ಸಾಹಿತಿ ಸುಧಾ ಬರಗೂರು, ಮಿಮಿಕ್ರಿ ಗೋಪಿ, ರಾಘವೇಂದ್ರ ಆಚಾರ್ ಭಾಗವಹಿಸಲಿದ್ದಾರೆ. 22ರಂದು ಸಂಜೆ 6.30ಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ, 23ರಂದು ಚಂದನ್ ಶೆಟ್ಟಿ ಅವರಿಂದ ಸಂಗೀತ ಕಾರ್ಯಕ್ರಮ, 24ರಂದು ಡಿಜೆ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.