ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಅಧಿಕಾರಿಯೊಬ್ಬರು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಮುನೇಶ್ವರ ಬ್ಲಾಕ್ ನಿವಾಸಿ ಅಮೃತ್ ಶಿರೂರ್(೪೦) ಆತ್ಮಹತ್ಯೆ ಮಾಡಿಕೊಂಡವರು. ಡಿ.೨೮ರಂದು ಸಂಜೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಮಾಲೀಕ ಗಿರೀಶ್ ಅವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಅಮೃತ್ ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪ ಮೂಲದವರು. ಕಳೆದ ೧೦ ವರ್ಷಗಳಿಂದ ಕೆಎಸ್‌ಡಿಎಲ್‌ನ ಖರೀದಿ ವಿಭಾಗದಲ್ಲಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮೀ ಲೇಔಟ್‌ನ ಮುನೇಶ್ವರ ಬ್ಲಾಕ್‌ನ ಗಿರೀಶ್ ಎಂಬುವವರ ಮಾಲೀಕತ್ವದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಡಿ.೨೮ರಂದು ಸಂಜೆ ೫ ಗಂಟೆಗೆ ಮನೆಯಲ್ಲೇ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಮಾಲೀಕ ಗಿರೀಶ್ ಅವರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಡೆತ್ ನೋಟ್ ಪತ್ತೆ:
ಅಮೃತ್ ಶಿರೂರ್ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು, ಪೊಲೀಸರು ಜಪ್ತಿ ಮಾಡಿದ್ದಾರೆ. ಪಾಲಕರಿಗೆ ಒಳ್ಳೆಯ ಮಗನಾಗಲಿಲ್ಲ. ಪತ್ನಿಗೆ ಒಳ್ಳೆಯ ಗಂಡನಾಗಲಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿರುವುದು ಕಂಡು ಬಂದಿದೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಮದುವೆಯಾಗಿದ್ದರು:
ಮೃತ ಅಮೃತ್ ಶಿರೂರ್ ಅವರು ಎರಡು ಮದುವೆಯಾಗಿದ್ದರು. ಮೊದಲಿಗೆ ಪ್ರೇಮವಿವಾಹವಾಗಿದ್ದು, ಕೆಲವೇ ತಿಂಗಳಲ್ಲಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ೨೦೧೯ರಲ್ಲಿ ಎರಡನೇ ಮದುವೆಯಾಗಿದ್ದು, ದಂಪತಿ ನಡುವೆ ಮನಸ್ತಾಪವಾಗಿ ದೂರುವಾಗಿದ್ದರು. ದಂಪತಿ ವಿಚ್ಛೇದನದ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕೆಲವು ವರ್ಷಗಳಿಂದ ಅಮೃತ್ ಮುನೇಶ್ವರ ಬ್ಲಾಕ್‌ನ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಇದೀಗ ಕೌಟುಂಬಿಕ ಕಾರಣಗಳಿಂದ ಮನನೊಂದಿದ್ದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.