ನ್ಯೂಸ್

ಡಿ.ಸಿ.ಸಿ.ಬ್ಯಾಂಕ್ ಚುನಾವಣೆಗೆ ಶಾಸಕರು ಸ್ಪರ್ಧೆಗೆ ಸಿದ್ಧತೆ / ೨ ವರ್ಷಗಳ ನಂತರ ಬ್ಯಾಂಕ್‌ಗೆ ಚುನಾವಣೆ / ಮೇ ೧೮ ರಿಂದ ನಾಮಪತ್ರಗಳ ಸಲ್ಲಿಕೆ / ಮೇ ೨೮ ರಂದು ಚುನಾವಣೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕಾಂಗ್ರೆಸ್ ಮುಖಂಡರ ನಡುವಿನ ಭಿನ್ನಮತದಿಂದ ಕಳೆದ ಎರಡು ವರ್ಷಗಳಿಂದ ಬ್ಯಾಂಕಿಗೆ ಆಡಳಿತ ಮಂಡಳಿ ಇಲ್ಲದೆ ಗರ ಬಡಿದಂತೆ ಆಗಿದ್ದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿಯ ೧೮ ಸ್ಥಾನಗಳಿಗೆ ಮೇ ೨೮ರಂದು ಚುನಾವಣೆ ನಿಗದಿಯಾಗಿದ್ದು, ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆ ಆಗಲು ಎರಡೂ ಜಿಲ್ಲೆಗಳ ಶಾಸಕರು ಮುಂದಾಗಿರುವುದು ವಿಶೇಷವಾಗಿದೆ.

ಬ್ಯಾಂಕಿನ ಆಡಳಿತ ಮಂಡಳಿಗೆ ಹಿಂದೆ ನಿರ್ದೇಶಕರಾಗಿದ್ದವರು ಮತ್ತೆ ಹೊಸದಾಗಿ ನಿರ್ದೇಶಕರಾಗಲು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಜ್ಜಾಗುತ್ತಿದ್ದಾರೆ. ಶಾಸಕರಾದ ರೂಪಕಲಾ ಎಂ.ಶಶಿಧರ್, ಕೊತ್ತೂರು ಮಂಜುನಾಥ್, ಎಸ್.ಎನ್.ಸುಬ್ಬಾರೆಡ್ಡಿ ಇವರು ಸಹ ಸ್ಪರ್ಧೆ ಮಾಡಲು ಸಿದ್ಧತೆಯಲ್ಲಿದ್ದಾರೆ. ಹಾಗೂ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ, ಮಾಜಿ ಸಚಿವ ಶಿವಶಂಕರ್‌ರೆಡ್ಡಿ ಇವರು ಚುನಾವಣಾ ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ.

ಈಗಾಗಲೇ ಕೊತ್ತೂರು ಮಂಜುನಾಥ್, ಟಿಎಪಿಎಂ.ಎಸ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂದು ಘೋಷಣೆ ಮಾಡಿದ್ದಾರೆ. ಹಾಗೂ ಮುಳಬಾಗಿಲು ತಾಲ್ಲೂಕು ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಕಾಂಗ್ರೇಸ್ ಅಭ್ಯರ್ಥಿಯಾಗಿ ದಿ.ನೀಲಕಂಠೇಗೌಡರ ಸಹೋದರ ಸರ್ವಜ್ಞಗೌಡರನ್ನು ಕಾಂಗ್ರೇಸ್ ನಿಂದ ಕಣಕ್ಕೆ ಇಳಿಸಲಾಗುವುದು ಎಂದು ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.

ಮತದಾರರ ಪಟ್ಟಿ ಪ್ರಕಟಣೆ :

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಸಂಬAಧಿಸಿದAತೆ ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು ೧೯೬೦ರ ನಿಯಮ ೧೩(ಡಿ) ರೀತ್ಯ ಅಂತಿಮ ಮತದಾರರ ಪಟ್ಟಿಯನ್ನು ಸಹ ಜಿಲ್ಲಾ ಚುನಾವಣಾ ಅಧಿಕಾರಿಗಳು ಪ್ರಕಟಣೆ ಮಾಡಿದ್ದಾರೆ.

ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯು ಮಾರ್ಚ್ ೨೮ ರಂದು ಸಲ್ಲಿಸಿದ್ದ ಮತದಾರರ ಪಟ್ಟಿಯನ್ನು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಉಪ ನಿರ್ದೇಶಕರಿಂದ ಪರಿಶೀಲನೆಗೆ ಒಳಪಡಿಸಿ ಏಪ್ರಿಲ್ ೭ರಂದು ಆಡಳಿತ ಮಂಡಳಿ ಚುನಾವಣೆಗೆ ಸಂಬAಧಪಟ್ಟAತೆ ಮತ ನೀಡುವ ಹಕ್ಕುಳ್ಳ ಸದಸ್ಯರು, ಡೆಲಿಗೇಟುಗಳ ಕರಡು ಪಟ್ಟಿ, ಸುಸ್ಥಿದಾರರ ಕರಡು ಪಟ್ಟಿ, ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿತ್ತು.

ಮೇ ೫ ವರೆಗೆ ಸ್ವೀಕೃತವಾದ ದೂರು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿಯನ್ನು ಮೇ ೧೨ರಂದು ಪ್ರಕಟಿಸಲಾಗಿದೆ.

ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಸುವಂತೆ ಮೇ ೨ ರಂದು ಉಚ್ಚ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಚುನಾವಣೆ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.

ಚುನಾವಣಾ ವೇಳಾಪಟ್ಟಿ ವಿವರ :

ಮೇ ೧೨ ರಂದು ಹೊರಡಿಸಲಾಗಿರುವ ಅಧಿಸೂಚನೆಯ ಪ್ರಕಾರ ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿನ ಚುನಾವಣಾ ವೇಳಾಪಟ್ಟಿ ಹೀಗಿದೆ.

ಚುನಾವಣಾ ಅಧಿಕಾರಿಯಾಗಿ ಕೋಲಾರ ಉಪವಿಭಾಗಾಧಿಕಾರಿ ಡಾ.ಮೈತ್ರಿಯನ್ನು ನಿಯೋಜಿಸಲಾಗಿದೆ.

ಮೇ ೧೮ರಿಂದ ೨೦ರ ವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು.

ಮೇ ೨೧ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಮೇ ೨೩ರವರೆಗೂ ಅವಕಾಶ ಕಲ್ಪಿಸಲಾಗಿದೆ.

ಮೇ ೨೮ರಂದು ಬೆಳಗ್ಗೆ ೯ ರಿಂದ ಸಂಜೆ ೪ ಗಂಟೆವರೆಗೂ ಮತದಾನ ಹಾಗೂ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ.

೧೮ ನಿರ್ದೇಶಕ ಸ್ಥಾನಗಳ ವಿವರ :

ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕಿಗೆ ೧೮ ಮುಂದೆ ನಿರ್ದೇಶಕರ ಆಯ್ಕೆ ನಡೆಯಬೇಕಾಗಿದೆ.

ಹೊಸದಾಗಿ ರಚನೆಯಾಗಿರುವ ಚೇಳೂರು ಮತ್ತು ಮಂಚೇನಹಳ್ಳಿ ತಾಲೂಕುಗಳು ಸೇರಿದಂತೆ ಎರಡು ಜಿಲ್ಲೆಯ ೧೪ ತಾಲ್ಲೂಕುಗಳಿಂದ ತಲಾ ಒಬ್ಬೊಬ್ಬರಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿಗಳು ಆಯ್ಕೆಯಾಗಲಿದ್ದಾರೆ.

ಎರಡು ಜಿಲ್ಲೆಯ ಟಿಎಪಿಸಿಎಂಎಸ್ ಗಳಿಂದ ಒಬ್ಬ ನಿರ್ದೇಶಕ, ಎರಡು ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳಿAದ ತಲಾ ಒಬ್ಬೊಬ್ಬ ನಿರ್ದೇಶಕ ಹಾಗೂ ಎರಡು ಜಿಲ್ಲೆಯ ಇನ್ನೆತರೆ ಸಹಕಾರ ಸಂಘಗಳಿAದ ಓರ್ವ ನಿರ್ದೇಶಕ ಸೇರಿ ಒಟ್ಟು ೧೮ ಮಂದಿಯ ಆಡಳಿತ ಮಂಡಳಿಗೆ ಅವಕಾಶ ಕಲ್ಪಿಸಲಾಗಿದೆ.

ರಂಗೇರಿದ ಚುನಾವಣಾ ಕಣ :

ಡಿ.ಸಿ.ಸಿ.ಬ್ಯಾಂಕಿಗೆ ಚುನಾವಣೆಯ ದಿನಾಂಕ ಘೋಷಣೆ ಆಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಪ್ರಚಾರ ಶುರುವಾಗಿದೆ. ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಬೇಕೆಂದು ಬಿಜೆಪಿ, ಜೆಡಿಎಸ್ ಮೈತ್ರಿಯಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೇಸ್‌ನಲ್ಲಿ ಒಂದು ಗುಂಪು ಮಂಗಳವಾರ ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ ಒಂದರಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ.ಅನಿಲ್‌ಕುಮಾರ್, ಶಾಸಕ ನಂಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೇಸ್ ಶಾಸಕರು ಸಭೆ ಸೇರಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಚಿತ್ರ ೧೫ ಕೆ.ಎಲ್.ಆರ್. ೦೧ : ಡಿ.ಸಿ.ಸಿ.ಬ್ಯಾಂಕ್ ಚಿತ್ರ