ಬೆಂಗಳೂರು: ‘ಕವಲು ದಾರಿ’, ಆಪರೇಷನ್ ಅಲಮೇಲಮ್ಮ’, ‘ರಾಮನ ಅವತಾರ’ ಖ್ಯಾತಿಯ ನಟ ರಿಷಿ ಸದ್ಯ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕನ್ನಡದಲ್ಲಿ ಅವರು ನಟಿಸಿರುವ ಆ್ಯಕ್ಷನ್-ಥ್ರಿಲ್ಲರ್ ಜಾನರ್‌ನ ‘ರುದ್ರ ಗರುಡ ಪುರಾಣ’ ತೆರೆ ಮೇಲೆ ಬರಲು ಸಿದ್ಧವಾಗಿದೆ.
1955ರಲ್ಲಿ ನಡೆದಿದ್ದ ವಿಮಾನ ಅಪಘಾತ ಹಾಗೂ ಪುರಾಣದ ಒಂದು ಉಪಕಥೆಯನ್ನು ಆಧರಿಸಿ ಚಿತ್ರದ ಕಥೆ ಹೆಣೆಯಲಾಗಿದ್ದು, ‘ಡಿಯರ್ ವಿಕ್ರಮ್’ ಖ್ಯಾತಿಯ ಕೆ.ಎಸ್.ನಂದೀಶ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ರಿಷಿಗೆ ನಟಿ ಪ್ರಿಯಾಂಕಾ ಕುಮಾರ್ ಜೋಡಿಯಾಗಿದ್ದಾರೆ. ಚಿತ್ರದ ಮೊದಲ ಹಾಡು ರಿಲೀಸ್ ಮಾಡಿದ ಚಿತ್ರತಂಡ ಇತ್ತೀಚೆಗಷ್ಟೆ ಸಿನಿಮಾ ಬಿಡುಗಡೆ ದಿನಾಂಕವನ್ನು ೋಷಿಸಿದೆ. ಡಿ. 27ರಂದು ‘ರುದ್ರ ಗರುಡ ಪುರಾಣ’ ಬಿಡುಗಡೆಯಾಗಲಿದೆ.
‘ಕಣ್ಮುಂದೆ ಬಂದು, ಕಣ್ಣಲ್ಲೇ ಕೊಂದು, ಕದ್ದೊಯ್ದೆ ನನ್ನ ನಿನ್ನ ಜೊತೆ’ ಎಂದು ಸಾಗುವ ನವಿರಾದ ರೊಮ್ಯಾಂಟಿಕ್ ಸಾಂಗ್ ಅನ್ನು ಚಿನ್ಮಯ್ ಭಾವಿಕೆರೆ ರಚಿಸಿದ್ದು, ಕೃಷ್ಣ ಪ್ರಸಾದ್ (ಕೆಪಿ) ಸಂಗೀತ ಸಂಯೋಜಿಸಿದ್ದಾರೆ. ಶ್ವೇತಾ ಮೋಹನ್ ಹಾಗೂ ಕಪಿಲ್ ಕಪಿಲನ್ ಧ್ವನಿಯಾಗಿದ್ದಾರೆ. ಚಿತ್ರದ ಬಗ್ಗೆ ರಿಷಿ, ‘ನಿರ್ದೇಶಕ ನಂದೀಶ್ ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಯಾವುದೇ ಕೊರತೆ ಇಲ್ಲದೆ ಕಥೆಯನ್ನು ತೆರೆ ಮೇಲೆ ತರಲು ಲೋಹಿತ್ ಸಹಕರಿಸಿದ್ದಾರೆ. ನಾನಿಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ. ಒಂದೊಳ್ಳೆ ತಂಡದ ಜತೆಗೆ ಕೆಲಸ ಮಾಡಿದ ಖುಷಿ ಇದೆ’ ಎಂದರು. ನಾಯಕಿ ಪ್ರಿಯಾಂಕಾ, ‘ನನಗಿಂತ ಹೆಚ್ಚಾಗಿ ನನ್ನ ಕುಟುಂಬದವರು ಈ ಸಿನಿಮಾ ಯಾವಾಗ ರಿಲೀಸ್ ಅಂತ ಕಾಯುತ್ತಿದ್ದರು. ಈ ಚಿತ್ರದ ಬಗ್ಗೆ ನನಗೆ ತುಂಬ ನಿರೀಕ್ಷೆಯಿದೆ’ ಎಂದು ಹೇಳಿಕೊಂಡರು.