ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಸಿದ್ದರಾಮಯ್ಯ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಎಂಬ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು.
ನಾಲ್ವಡಿ ಅವರ ಇತಿಹಾಸ ತಿಳಿಯದ ಡಾ.ಯತೀಂದ್ರ ಸಿದ್ದರಾಮಯ್ಯ ಮಾತು ಕೇಳಿದರೆ ನಗು ಬರುತ್ತದೆ. ನಾಲ್ವಡಿ ಅವರಿಗಿಂತ ನಮ್ಮಪ್ಪನದೇ ಜಾಸ್ತಿ ಕೊಡುಗೆ ಎಂದು ಹೇಳಿರುವ ಅವರಿಗೆ ಬಹುಶಃ ನಾಲ್ವಡಿ ಅವರು ನಮ್ಮ ರಾಜ್ಯಕ್ಕೆ ನೀಡಿರುವ ನೂರಾರು ಕೊಡುಗೆಗಳು ತಿಳಿದಿಲ್ಲ. ಶಿಕ್ಷಣ, ನೀರಾವರಿ, ಕೈಗಾರಿಕೆ, ಕಾರ್ಖಾನೆ, ಪ್ರಜೆಗಳಿಗೆ ಸಾಮಾಜಿಕ ನ್ಯಾಯ ನೀಡಿ, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಾಲ್ವಡಿಯವರು ರಾಜ್ಯಕ್ಕೆ ನೀಡಿದ ಕೊಡುಗೆಗಳಿಲ್ಲ. ನೂರಾರು ಜನ್ಮ ಎತ್ತಿದರೂ ಯಾರೂ ನಾಲ್ವಡಿಯವರ ಕಾಲಿನ ಧೂಳಿಗೂ ಸಮನಾಗುವುದಿಲ್ಲ. ಅವರ ದೂರ ದೃಷ್ಟಿಯ ಆಡಳಿತದಿಂದ ಅಕ್ಷರಶಃ ಸುವರ್ಣ ಯುಗ ಸೃಷ್ಟಿಸಿದರು. ಅಭಿವೃದ್ಧಿಯ ಹರಿಕಾರರಾದ ನಾಲ್ವಡಿ ಮಹಾರಾಜರೆಲ್ಲಿ, ಪ್ರತಿ ಕನ್ನಡಿಗರ ಮೇಲೆ ಸಾಲದ ಹೊರೆ ಹೊರಿಸಿರುವ, ಎಲ್ಲ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಮಾಡಿರುವ ಸಿದ್ದರಾಮಯ್ಯ ಅವರೆಲ್ಲಿ ಎಂದು ಕಿಡಿ ಕಾರಿದರು.
ಸಿದ್ದರಾಮಯ್ಯ ರಾಜಕೀಯದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡು ಪಕ್ಷಗಳನ್ನು ಬದಲಾವಣೆ ಮಾಡಿ, ರಾಜ್ಯದ ಜನರ ತೆರಿಗೆ ಹಣದಲ್ಲಿ ಐಷಾರಾಮಿ ಜೀವನ ನಡೆಸಿ, ಜನರ ಹಣದಲ್ಲಿ ಜನರಿಗೆ ಬಿಟ್ಟಿ ಭಾಗ್ಯಗಳನ್ನು ನೀಡುತ್ತಿದ್ದಾರೆಯೇ ಹೊರತು ಅವರ ಮನೆಯಿಂದ ಹಣ ನತಂದು ಅಭಿವೃದ್ಧಿ ಮಾಡುತ್ತಿಲ್ಲ. ಮಹಾರಾಜರು ಕಟ್ಟಿಸಿದ ಮೈಸೂರು ಮೆಡಿಕಲ್ ಕಾಲೇಜು, ಕೆ.ಆರ್.ಆಸ್ಪತ್ರೆಗೆ ಸುಣ್ಣ ಬಣ್ಣ ಹೊಡೆಸಲು ಆಗಿಲ್ಲ. ಯತೀಂದ್ರರ ಈ ಹೇಳಿಕೆಯನ್ನು ರಾಜ್ಯದ ಒಬ್ಬನೇ ಒಬ್ಬ ನಾಗರಿಕ, ಬುದ್ಧಿಜೀವಿಗಳು, ಯಾರು ಖಂಡಿತವಾಗಿ ಒಪ್ಪುವುದಿಲ್ಲ. ಇದುವರೆಗೂ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸರಿಗೆ ಹೋಲಿಸಿಕೊಳ್ಳುತ್ತಿದ್ದವರು. ಇದೀಗ ಪದೋನ್ನತಿ ಪಡೆದುಕೊಂಡು ನಾಲ್ವಡಿ ಮಹಾರಾಜರೊಂದಿಗೆ ಹೋಲಿಸಿಕೊಳ್ಳುತ್ತಿರುವುದು ಅತ್ಯಂತ ಖಂಡನೀಯ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರ ಕೊಡುಗೆ ನಮ್ಮ ಜಿಲ್ಲೆಗೆ ಶೂನ್ಯ. ಕೇವಲ ತಮ್ಮ ರಾಜಕೀಯ ಪ್ರಚಾರಕ್ಕಾಗಿ ಮನಬಂದಂತೆ ಹುಚ್ಚು ಹೇಳಿಕೆ ನೀಡುತ್ತಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಈ ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ರಾಜಶೇಖರ್.ಬಿ.ಬಿ, ನಂಜುಂಡ, ಸಂತೋಷ್, ಮನುಗೌಡ, ಗೌತಮ್, ಶರತ್‌ಚಂದ್ರು, ಪ್ರತಾಪ್.ಜಿ, ಮಂಜುಳಾ, ಗೋಲ್ಡ್ ಸುರೇಶ್, ಮಂಜುನಾಥ್, ಅನುರಾಜ್, ಸಿದ್ದೇಗೌಡ, ಲೋಕೇಶ್, ರಮೇಶ್, ಹರೀಶ್, ಭಾಗ್ಯಮ್ಮ, ಶಿವು, ಸಿಂಧುವಳ್ಳಿ ಶಿವಕುಮಾರ್, ಹೋನ್ನೇಗೌಡ ಇತರರು ಇದ್ದರು.