ನ್ಯೂಸ್

ಡಾ.ಭಾನುಪ್ರಕಾಶ್ ಶರ್ಮಾ ಬೆಂಬಲಿಸಲು ಮನವಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮೈಸೂರು ಭಾಗದವರೇ ಆದ ಡಾ.ಭಾನುಪ್ರಕಾಶ್ ಶರ್ಮಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಎಲ್ಲರೂ ಬೆಂಬಲ ನೀಡಬೇಕೆಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದರು.

ಪ್ರಸ್ತುತ ಅಧ್ಯಕ್ಷರಾಗಿರುವ ಅಶೋಕ್ ಹಾರನಹಳ್ಳಿ ಅವರು ಮತ್ತೊಮ್ಮೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಇದುವರೆಗೂ ಬೆಂಗಳೂರಿನ ಭಾಗದವರೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾ ಬರುತ್ತಿದ್ದಾರೆ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೀಗಾಗಿ ಮೈಸೂರು ಭಾಗದವರೂ ಆಯ್ಕೆ ಆಗಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ವಿವಿಧ ಸಂಘ ಸಂಸ್ಥೆಗಳಲ್ಲಿ, ಧಾರ್ಮಿಕ, ಆಧ್ಯಾತ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಡಾ.ಭಾನುಪ್ರಕಾಶ್ ಶರ್ಮ ಅವರನ್ನು ಕಣಕ್ಕಿಳಿಸಲಾಗುತ್ತಿದೆ. ಇವರ ಸ್ಪರ್ಧೆಗೆ ವಿವಿಧ ವಿಪ್ರ ಸಂಘ ಸಂಸ್ಥೆಗಳು ಸಹಾ ಬೆಂಬಲ ಸೂಚಿಸಿವೆ. ಜತೆಗೆ, ಶೀಘ್ರದಲ್ಲೇ ಅಶೋಕ ಹಾರನಹಳ್ಳಿ ಅವರನ್ನು ಭೇಟಿ ಮಾಡಿ ಬೆಂಬಲ ಕೋರಲಿದ್ದೇವೆ ಎಂದು ತಿಳಿಸಿದರು.

ಡಾ.ಭಾನುಪ್ರಕಾಶ್ ಶರ್ಮ, ಕೆ.ರಘುರಾಮ ವಾಜಪೇಯಿ ಮತ್ತಿತರರು ಹಾಜರಿದ್ದರು.