ಮೈಸೂರು ರಾಜರು ಹಿಂದುಸ್ಥಾನಿ ಸಂಗೀತಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹಿಂದುಸ್ಥಾನಿ ಸಂಗೀತ ಗಾಯಕಿ ವೈಷ್ಣವಿ ಹಾನಗಲ್ ಹೇಳಿದರು.
ನಗರದ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಡಾ.ಗಂಗೂಬಾಯಿ ಹಾನಗಲ್ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ರಾಜರ ಪ್ರೋತ್ಸಹದಿಂದಲೇ ಹುಬ್ಬಳಿ-ಧಾರವಾಡದಲ್ಲಿ ಪ್ರಸಿದ್ಧ ಹಿಂದುಸ್ಥಾನಿ ಗಾಯಕರು ಹುಟ್ಟಿಕೊಳ್ಳಲು ಕಾರಣವಾಯಿತು ಎಂದರು.
ಮುಖ್ಯವಾಗಿ ಜಯಚಾಮರಾಜೇಂದ್ರ ಒಡೆಯರ್ ಕೊಡುಗೆ ದೊಡ್ಡದು. ಅವರು ತಮ್ಮ ಆಸ್ಥಾನದಲ್ಲಿ ಮೀರತ್ತಿನ ಕರೀಂ ಖಾನ್ ಸಾಬ್ ಅವರನ್ನು ಹಿಂದುಸ್ಥಾನಿ ಗಾಯಕರನ್ನಾಗಿ ನೇಮಿಸಿಕೊಂಡಿದ್ದರು ಎಂದರು.
ಗಂಗೂಬಾಯಿ ಹಾನಗಲ್ ಅವರು ಒಳ್ಳೆಯ ಸಂಗೀತಗಾರ್ತಿಯ ಜತೆಗೆ ಒಳ್ಳೆಯ ಗೃಹಿಣಿ ಆಗಿದ್ದರು. ಅವರು ಕಲೆಯಲ್ಲಿ ಸತ್ವ ತರಲು ಆ ಕಲೆಯನ್ನು ಪ್ರೀತಿಸುತ್ತಿದ್ದರು. ಈ ಗುಣವನ್ನು ಇಂದು ನಾವೆಲ್ಲ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂಗೀತ ವಿವಿಗೆ ಗಂಗೂಬಾಯಿ ಹಾನಗಲ್ ಅವರು ಹೆಸರಿಟ್ಟು ಕಾಕತಾಳೀಯವೇ ಹೊರತು ಪೂರ್ವನಿಯೋಜಿತವಲ್ಲ. ಗಂಗೂಬಾಯಿ ಹಾನಗಲ್ ಅವರು 2009ರಲ್ಲಿ ನಿಧನರಾದಗ ಅಂದಿನ ಸಿಎಂ ಗಂಗೂಬಾಯಿ ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿ ಹಾನಗಲ್ ಎಂದು ಹೆಸರಿಟ್ಟರು ಎಂದು ತಿಳಿಸಿದರು.
ಕುಲಪತಿ ಪ್ರೊ.ನಾಗೇಶ್ ವಿ. ಬೆಟ್ಟಕೋಟೆ, ಕರ್ನಾಟಕ ಶಿಲ್ಪಕಲಾ ಅಕಾಡಮಿಯ ಮಾಜಿ ಅಧ್ಯಕ್ಷ ವೀರಣ್ಣ ಎಂ.ಅರ್ಕಸಾಲಿ, ಕುಲಸಚಿವೆ ಕೆ.ಎಸ್.ರೇಖಾ ಇತರರಿದ್ದರು.