ನಂಜನಗೂಡಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ಶಿವಕುಮಾರ್ ಕಾಸ್ನೂರು, ಡಾ.ನಂದಿನಿ, ಸಿ.ಎಂ ಶಂಕರ್, ನಾಗೇಶ್ ರಾಜ್, ಶಂಕರಪುರ ಸುರೇಶ್, ಚುಂಚನಹಳ್ಳಿ ಮಲ್ಲೇಶ್, ಮಲ್ಲಹಳ್ಳಿ ನಾರಾಯಣ್, ನಗರ್ಲೆ ಎಂ. ವಿಜಯಕುಮಾರ್ ಮತ್ತಿತರರಿದ್ದರು. 
ನ್ಯೂಸ್

ಡಾ. ಅಂಬೇಡ್ಕರ್ ಸಂದೇಶ ಪಾಲನೆಯಾಗಲಿ

ನಂಜನಗೂಡು: ವಿಶ್ವದ ಶ್ರೇಷ್ಠ ಸಂವಿಧಾನ ಎಂಬ ಹಿರಿಮೆ ಹೊಂದಿರುವ ಭಾರತೀಯ ಸಂವಿಧಾನದ ಶಿಲ್ಪಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸೋಮವಾರ ನಂಜನಗೂಡು ತಾಲೂಕು ಡಾ.ಅಂಬೇಡ್ಕರ್ ಯುವಕ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಡಾ. ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿವಿಧತೆಯನ್ನು ಹೊಂದಿರುವ ಭಾರತ ದೇಶದ ಐಕ್ಯತೆಯ ಪ್ರತೀಕವೇ ದೇಶದ ಸಂವಿಧಾನವಾಗಿದ್ದು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಶಾಲೆಗಳಲ್ಲಿ ಸಂವಿಧಾನದ ಪೀಠಿಕೆಯನ್ನು ಓದುವ ಅವಕಾಶ ಕಲ್ಪಿಸುವ ಮೂಲಕ ಮಕ್ಕಳಿಗೆ ಓದುವ ಸಮಯದಲ್ಲೇ ಸಂವಿಧಾನದ ಪರಿಚಯ ಮಾಡಿಕೊಡಲಾಗಿದೆ. ಇನ್ನು ನಂಜನಗೂಡಿನಲ್ಲಿ ಜು.10ರಂದು ನಡೆಯಲಿರುವ ಅಂಬೇಡ್ಕರ್ ಜಯಂತಿ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಏರ್ಪಡಿಸಿರುವುದು ಉತ್ತಮ ಬೆಳವಣಿಗೆ. ಸ್ಪರ್ಧೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿರುವುದರಿಂದ ಚರ್ಚಾ ಸ್ಪರ್ಧೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇನ್ನು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತರುವುದು ಚರ್ಚಾ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದ್ದು ಈ ಸ್ಪರ್ಧೆಯಲ್ಲಿನ ಫಲಿತಾಂಶದ ಬಗ್ಗೆ ಗಮನ ಕೊಡದೆ ವಿಷಯ ಮಂಡನೆಗೆ ಅಷ್ಟೇ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ನಾಳೆ ಬಹುಮಾನ ವಿತರಣೆ: ಚರ್ಚಾ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯ 15ಕ್ಕೂ ಹೆಚ್ಚು ಪದವಿ ಕಾಲೇಜುಗಳಿಂದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಜು.10 ರಂದು ನಂಜನಗೂಡು ನಗರದಲ್ಲಿ ನಡೆಯುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುಮಾನ ವಿತರಿಸಲಿದ್ದಾರೆ ಎಂದು ಎಂದು ಆಯೋಜಕರು ತಿಳಿಸಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಎಎಸ್‌ಪಿ ಡಾ. ನಂದಿನಿ, ನಗರ ಬ್ಲಾಕ್ ಅಧ್ಯಕ್ಷ ಸಿ.ಎಂ ಶಂಕರ್, ಮಾಜಿ ತಾಪಂ ಅಧ್ಯಕ್ಷ ನಾಗೇಶ್ ರಾಜ್, ದಲಿತ ಸಂಘಟನೆಗಳ ಒಕ್ಕೂಟದ ಶಂಕರಪುರ ಸುರೇಶ್, ಚುಂಚನಹಳ್ಳಿ ಮಲ್ಲೇಶ್, ಮಲ್ಲಹಳ್ಳಿ ನಾರಾಯಣ್, ನಗರ್ಲೆ ಎಂ. ವಿಜಯಕುಮಾರ್ ಮತ್ತಿತರರಿದ್ದರು.