AMBEDKAR JAYANTHI HELD AT ROTARY JLB 
ನ್ಯೂಸ್

ಡಾ.ಅಂಬೇಡ್ಕರ್ ಅರಿತುಕೊಳ್ಳುವಲ್ಲಿ ನಾವು ವಿಫಲ

ಭಾರತೀಯರಾದ ನಾವು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಪೂರ್ಣವಾಗಿ ಅರಿತುಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ಸಂಸ್ಕೃತಿ ಚಿಂತಕ ಶಂಕರ ದೇವನೂರು ಹೇಳಿದರು.

ನಗರದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರ ಚಿಂತನೆಯಲ್ಲಿ ಬುದ್ಧನ ನಿರ್ವಿಕಾರ ತತ್ವ, ಕವಿಗಳ ತಾತ್ವಿಕ ಚಿಂತನೆ, ಜ್ಯೋತಿ ಬಾ ಫುಲೆ ಅವರ ಸಮಾನತೆಯ ರೂಪ ಇಂದಿಗೂ ಹಸಿರಾಗಿದೆ ಎಂದರು.

ಅಂಬೇಡ್ಕರ್ ಅವರನ್ನು ಮಹಾ ಮೇದಾವಿ, ಜ್ಞಾನಿ ಎಂದು ಭಾರತೀಯರು ಹೇಳುವುದಿಲ್ಲ. ಆದರೆ ಪಾಶ್ಚಿಮಾತ್ಯ ಚಿಂತಕರೊಬ್ಬರು ತಮ್ಮ ಕೃತಿಯಲ್ಲಿ ಜಗತ್ತಿನ 5 ಜನ ಘನ ವಿದ್ವಾಂಸರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೂಡ ಒಬ್ಬರು ಎಂದು ಹೇಳಿದ್ದಾರೆ. ಆದರೆ ಅಂಬೇಡ್ಕರ್ ಅವರನ್ನು ನಾವು ಪೂರ್ಣವಾಗಿ ಅರಿತುಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದು ನುಡಿದರು.

ಇಂದಿಗೂ ಜಾತಿ ವ್ಯವಸ್ಥೆ ನಿಂತಿಲ್ಲ. ಗುಜರಾತಿನ ನ್ಯಾಯಾಧೀಶರೊಬ್ಬರು ತಮ್ಮ ಹಿಂದೆ ದಲಿತ ವಕೀಲ ಕುಳಿತಿದ್ದ ಎಂಬ ಕಾರಣಕ್ಕೆ ಹಸುವಿನ ಗಂಜಲ ಹಾಕಿ ಶುದ್ಧಿ ಮಾಡಿದ್ದಾರೆ. ಇನ್ನೊಂದು ಕಡೆ ದಲಿತರಿಗೆ ಹಸುವಿನ ಹಾಲನ್ನು ಕೊಡುವುದಿಲ್ಲ. ಕಾರಣ ದಲಿತರಿಗೆ ಹಾಲು ಕೊಟ್ಟರೆ ಹಸು ಕಡಿಮೆ ಹಾಲನ್ನು ಕೊಡುತ್ತದೆ ಎಂಬ ಮೂಢ ನಂಬಿಕೆಯಲ್ಲಿದ್ದಾರೆ. ಇದನ್ನು ಕಣ್ಣಾರೆ ಕಂಡಿದ್ದೇನೆ ಎಂದರು.

ಬದುಕು ಬೆಳಕಾಗಬೇಕು. ಇದೇ ಜೀವನ ಮೌಲ್ಯ ಹಾಗೂ ಅಂಬೇಡ್ಕರ್. ನಮ್ಮ ಮನೆಯ ಮುಂದೆ ಯಾವುದಾದರೂ ಹೂವಿನ ಗಿಡವನ್ನು ಬೆಳೆಸಿದರೆ ಅದು ತನ್ನ ಸಾಧನೆಯನ್ನು ಒಂದು ಮೊಗ್ಗಿನಲ್ಲಿ ಕೂಡಿಡುತ್ತದೆ. ಆ ಮೊಗ್ಗು ಅರಳಿ ಕಾಲಾಂತರದಲ್ಲಿ ತನ್ನ ಸುತ್ತಮುತ್ತಲಿನ ವಾತಾವರಣದಲ್ಲಿ ಸೀಮಾತೀತವಾಗಿ ಪರಿಮಳವನ್ನು ಹರಡುತ್ತದೆ. ಹೀಗೆ ನಮ್ಮ ಬದುಕು ಕೂಡ ಹೂವಿನಂತಾಗಬೇಕು ಹಾಗೂ ಅಂಬೇಡ್ಕರ್ ಅವರಂತೆ ಆಗಬೇಕು ಎಂದು ಹೇಳಿದರು.

ಇತಿಹಾಸವನ್ನು ಅವಲೋಕನ ಮಾಡಿದಾಗ ಅನೇಕ ಧರ್ಮಗಳು ಈ ಜಗತ್ತಿನಲ್ಲಿ ಕಾಣಸಿಗುತ್ತದೆ. ಧರ್ಮ ಎಂದರೆ ಒಳ್ಳೆಯ ನಡವಳಿಕೆ, ದಯೆ, ಮಾನವೀಯತೆ. ಮನುಷ್ಯನನ್ನು ಮಾನವೀಯತೆ ಕಡೆ ಕರೆದೊಯ್ಯುವ ನೆಲೆಯಲ್ಲಿ ಧರ್ಮಗಳು ಮನುಷ್ಯನಿಗೆ ಸಹಕಾರಿಯಾಗಬೇಕು ಎಂದರು.

ಪ್ರಾಂಶುಪಾಲ ಪ್ರೊ.ಎಸ್.ಮಹದೇವಮೂರ್ತಿ, ಜ್ಞಾನ ವಾಹಿನಿಯ ಸಂಚಾಲಕ ಜಿ.ಕೃಷ್ಣಮೂರ್ತಿ, ಐ.ಕ್ಯೂ.ಎ.ಸಿ. ಸಂಯೋಜಕ ಪ್ರೊ.ಬಿ.ಎಂ.ವೆಂಕಟೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಸಿ.ನಾಗೇಶ್‌ಬಾಬು, ಆಡಳಿತಾಕಾರಿ ಪ್ರೊ.ಕೆ.ಅಜಯ್ಕುಮಾರ್ ಇದ್ದರು.