ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಪ್ರತಿ ಡಿಸಿಸಿ ಬ್ಯಾಂಕ್ ಶಾಖೆಗೆ ತಲಾ 10 ಕೋಟಿ ರೂ.ಗಳ ಠೇವಣಿ ಸಂಗ್ರಹದ ಗುರಿಯನ್ನು ಜುಲೈ ಅಂತ್ಯದೊಳಗೆ ಸಾಧಿಸುವಂತೆ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸೂಚನೆ ನೀಡಿದರು.
ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಭಾನುವಾರ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಏಳೂವರೆ ವರ್ಷಗಳ ಹಿಂದೆ ಬ್ಯಾಂಕಿನ ಸ್ಥಿತಿ ನೆನಪು ಮಾಡಿಕೊಳ್ಳಿ, ಆರೇಳು ಸಾವಿರವೂ ಸಂಬಳ ಸಿಗದೆ ಅನುಭವಿಸಿರುವ ನೋವು ಮತ್ತೆ ಇಣುಕಿ ನೋಡಬಾರದು ಎಂದರೆ ನಿಮ್ಮ ಬದ್ಧತೆಯ ಕೆಲಸ ಅತಿಮುಖ್ಯ ಎಂದು ಎಚ್ಚರಿಸಿದರು.
ಅನ್ನ ನೀಡುತ್ತಿರುವ ಬ್ಯಾಂಕಿನ ಕೆಲಸವನ್ನು ಬದ್ಧತೆಯಿಂದ ಮಾಡಬೇಕು. ಇಲ್ಲವಾದರೆ ಬೀದಿಗೆ ಬೀಳುತ್ತೀರಿ, ನೋವುಂಡ ದಿನಗಳ ಸ್ಮರಣೆ ಅಗತ್ಯ, ಅನ್ನ ತಿಂದ ಮನೆಗೆ ದ್ರೋಹ ಮಾಡಬಾರದು. ಪ್ರತಿ ಬ್ಯಾಂಕ್ ಶಾಖೆಗೆ ನೀಡಿರುವ 10 ಕೋಟಿ ರೂ. ಠೇವಣಿ ಸಂಗ್ರಹ ಗುರಿಯ ಜತೆಗೆ ವೈಯಕ್ತಿಕವಾಗಿ ತಲಾ ಕನಿಷ್ಠ 5 ಲಕ್ಷ ರೂ. ಸಂಗ್ರಹಿಸಿ ಕರ್ತವ್ಯ ನಿಷ್ಠೆ ಸಾಕ್ಷೀಕರಿಸಿ ಎಂದರು.
ದಿವಾಳಿಯಾಗಿದ್ದ ಬ್ಯಾಂಕನ್ನು ನಾನು, ನಮ್ಮ ಆಡಳಿತ ಮಂಡಳಿಯವರು ಕಷ್ಟಪಟ್ಟು ಉಳಿಸಿ ಬೆಳೆಸಿದ್ದೇವೆ. ನಾನು ತಪ್ಪು ಮಾಡಿದ್ದರೆ ನೇರವಾಗಿ ಹೇಳಿ, ಅದು ಬಿಟ್ಟು ಕೆಲಸ ಮಾಡಲಾಗದೇ ಬ್ಯಾಂಕಿನ ವಿರುದ್ಧ ಅಪಪ್ರಚಾರ ನಡೆಸದಿರಿ, ನಿಮ್ಮ ಮಕ್ಕಳಂತೆ ಬ್ಯಾಂಕನ್ನು ಪೋಷಿಸಿ ಇಲ್ಲವಾದರೆ ನಿಮ್ಮ ಕುಟುಂಬಗಳಿಗೆ ಅನ್ಯಾಯ ಮಾಡಿದಂತೆ. ಗುರಿಸಾಧನೆಯಲ್ಲಿ ವಿಫಲರಾದವರಿಗೆ ವರ್ಗಾವಣೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದರು.
ಗಣಕೀಕೃತ ಆಡಿಟ್ ಕಾರ್ಯ ವಿಳಂಬ ಮಾಡುತ್ತಿರುವ ವಿ-ಸಾಫ್ಟ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅಧ್ಯಕ್ಷರು, ಕನಿಷ್ಠ 12 ್ಯಾಕ್ಸ್‌ಗಳಿಗೆ ಒಬ್ಬರಂತೆ ಸಿಬ್ಬಂದಿ ನೇಮಿಸಿ ಗಣಕೀಕೃತ ಆಡಿಟ್ ಜು.30ರೊಳಗೆ ಮುಗಿಸಿಕೊಡಿ ಇಲ್ಲವಾದರೆ ಸಹಿಸಲ್ಲ ಎಂದು ಎಚ್ಚರಿಸಿದರು. ಈಗಾಗಲೆ ಎಲ್ಲ ಬ್ಯಾಂಕ್ ಶಾಖೆಗಳ ಆಡಿಟ್ ನಡೆಯುತ್ತಿದ್ದು, ದಾಖಲಿಸಿರುವ ಲೋಪಗಳನ್ನು ಸರಿಪಡಿಸಿಕೊಳ್ಳಿ ಎಂದರು.
ವಿವಿಧೋದ್ಧೇಶ ಸೇವಾ ಕೇಂದ್ರಗಳಡಿ ಸೊಸೈಟಿಗಳು ಗೋದಾಮು ನಿರ್ಮಾಣಕ್ಕೆ ಕೂಡಲೇ ಅಂದಾಜುಪಟ್ಟಿ, ನಕ್ಷೆ ನೀಡಬೇಕು ಎಂದು ಸೂಚಿಸಿದರಲ್ಲದೆ ಜು.1ರಿಂದ ಎಸ್‌ಎಸ್‌ಜಿಗಳ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಿ, ಯಾವುದೇ ಸಾಲ ಎನ್‌ಪಿಎ ಆಗದಂತೆ ಎಚ್ಚರವಹಿಸಬೇಕು ಎಂದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮಂತರೆಡ್ಡಿ, ಕೆ.ವಿ.ದಯಾನಂದ್, ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ, ಶಿವಕುಮಾರ್, ದೊಡ್ಡಮುನಿ, ನಾಗೇಶ್, ಖಲೀಮುಲ್ಲಾ ಹಾಗೂ ಎರಡೂ ಜಿಲ್ಲೆಗಳ ಬ್ಯಾಂಕ್ ಶಾಖೆಗಳ ಎಲ್ಲ ವ್ಯವಸ್ಥಾಪಕರು, ಸಿಬ್ಬಂದಿ ಹಾಜರಿದ್ದರು.
ಪಟ್ಟಿ ಮಾಡಿಕೊಡಿ: ಅವಿಭಜಿತ ಜಿಲ್ಲೆಯಲ್ಲಿ ಬ್ಯಾಂಕಿನಿಂದ ಸಾಲ ಪಡೆದಿರುವ ರೈತರಲ್ಲಿ ಸುಮಾರು 100 ಮಂದಿ ಕೋವಿಡ್‌ಗೆ ಬಲಿಯಾಗಿರುವ ಮಾಹಿತಿ ಇದೆ. ಕೋವಿಡ್ ಸಾವಿನ ಪ್ರಮಾಣಪತ್ರ, ಆಧಾರ್‌ಕಾರ್ಡ್, ಪಡಿತರ ಕಾರ್ಡ್ ಸಾಲ ಪಡೆದ ದಾಖಲೆಯನ್ನು ಜು.1 ರೊಳಗೆ ಬ್ಯಾಂಕಿನ ಕೇಂದ್ರ ಕಚೇರಿಗೆ ತಲುಪಿಸಿ, ಇವರಿಗೆ ಪರಿಹಾರ ನೀಡಲು ಅಪೆಕ್ಸ್ ಬ್ಯಾಂಕ್ ಮುಂದೆ ಬಂದಿದೆ ಎಂದು ಗೋವಿಂದಗೌಡ ಹೇಳಿದರು.