ನ್ಯೂಸ್

ಟ್ರಾಫಿಕ್ ಪೊಲೀಸರು ಸಾರ್ವಜನಿಕರ ಕಿರುಕುಳ ನೀಡಿದರೆ ಕ್ರಮ: ಮೈಸೂರು ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಎಚ್ಚರಿಕೆ

ಮೈಸೂರು: ನಗರದಲ್ಲಿ ಟ್ರಾಫಿಕ್ ಪೊಲೀಸರು ಅಕ್ರಮವಾಗಿ ಜನರಿಂದ ಹಣ ಸಂಗ್ರಹಿಸುವುದು ಹಾಗೂ ನಿಯಮ ಬಾಹಿರವಾಗಿ ನಡೆದುಕೊಂ ಡರೆ ವಿಡಿಯೋ ರೆಕಾರ್ಡ್ ಮಾಡಿ ನನಗೆ ಕಳುಹಿಸಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ಹೇಳಿದರು.

ಮೈಸೂರು ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ವತಿಯಿಂದ ವಿಭಾಗದ ಹರ್ಮನ್ ಮೊಗ್ಲಿಂಗ್ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದರೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಂಡ ಪಾವತಿಸಬೇಕು. ಆದರೆ, ವಾಹನ ಸವಾರರಿಂದ ಹಣ ಪಡೆದು ರಶೀದಿ ನೀಡದೆ ಇರುವುದು ಕಂಡುಬಂದರೆ ಅಥವಾ ಹೆಚ್ಚುವರಿ ಹಣಕ್ಕೆ ಬೇಡಿಕೆ ಇಟ್ಟರೆ ವಿಡಿಯೋ ರೆಕಾರ್ಡ್ ಮಾಡಿ ಕಳುಹಿಸಿ ಎಂದರು.

ನಗರದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು, ಅಪಘಾತ ಹಾಗೂ ಅಪರಾಧ ಪ್ರಮಾಣ ತಗ್ಗಿಸಲು ಪೊಲೀಸರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಹಲವಾರು ಪೊಲೀಸರು ಇದ್ದಾರೆ. ಅದರ ನಡುವೆ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಇರುವವರೂ ಇದ್ದಾರೆ. ಸಮಾಜದಲ್ಲಿ ಒಳ್ಳೆಯವರು ಕೆಟ್ಟವರು ಇರುವುದು ಸಹಜ. ಹಾಗಾಗಿ ಪೊಲೀಸರು ತಪ್ಪು ಮಾಡಿದರೂ ಕ್ರಮ ಕೈಗೊಳ್ಳಲಾಗುವುದು. ಟ್ರಾಫಿಕ್ ವಿಚಾರದಲ್ಲಿ ಸಾರ್ವಜನಿಕರ ದೂರುಗಳನ್ನು ಆಧರಿಸಿ ಇತ್ತೀಚೆಗೆ ಪೊಲೀಸ್ ಪೇದೆಯೊಬ್ಬರನ್ನು ಅಮಾನತುಗೊಳಿಸಲಾಗಿದೆ. ಪೊಲೀಸರು ಮರೆಯಲ್ಲಿ ನಿಂತು ಕಳ್ಳರ ಹಾಗೆ ವಾಹನ ಸವಾರರನ್ನು ಹಿಡಿಯುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ಮೈಸೂರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಆದರೆ, ನಗರವನ್ನು ಮುಂದಿನ ದಿನಗಳಲ್ಲಿ ಯೋಜನಾಬದ್ಧವಾಗಿ ಅಭಿವೃದ್ಧಿ ಪಡಿಸದೆ ಇದ್ದರೆ ಇಲ್ಲಿಯೂ ಟ್ರಾಫಿಕ್ ಸಮಸ್ಯೆ ಕಂಡು ಬರುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ 20-25 ವರ್ಷಗಳಿಗೆ ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿದರೆ ಉತ್ತಮ. ಹೈದರಾಬಾದ್‌ನಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ ಹಲವಾರು ಬಾರಿ ರಸ್ತೆ ವಿಸ್ತರಣೆ ಮಾಡಲಾಗಿದೆ. ಅದೇ ರೀತಿ ನಗರದ ಬೆಳವಣಿಗೆಯನ್ನು ಗಮನಿಸಿ ರಸ್ತೆ ವಿಸ್ತರಣೆ ಮಾಡಬೇಕಾಗಿರುವುದು ಅನಿವಾರ್ಯ ಎಂದು ಅಭಿಪ್ರಾಯಪಟ್ಟರು.

ಸಾರ್ವಜನಿಕರು ನನ್ನನ್ನು ಬೆಳಗ್ಗೆ 10.30 ರಿಂದ ರಾತ್ರಿ 9ರ ಅವಧಿಯಲ್ಲಿ ಯಾವುದೇ ಸಂದರ್ಭದಲ್ಲಾದರೂ ಭೇಟಿ ಮಾಡಬಹುದು. ಸಾರ್ವಜನಿಕರ ಭೇಟಿಗೆ ನಿರ್ದಿಷ್ಟ ಸಮಯವನ್ನು ನಾನು ನಿಗದಿ ಮಾಡಿಲ್ಲ. ಎಲ್ಲರು ಸುಲಭವಾಗಿ ನನ್ನನ್ನು ಭೇಟಿಯಾಗಲು ಅವಕಾಶ ದೊರೆಯಬೇಕು ಎಂಬ ಉದ್ದೇಶದಿಂದ ಸಾರ್ವಜನಿಕರ ಸಂದರ್ಶನಕ್ಕೆ ನಿರ್ದಿಷ್ಟ ಸಮಯ ನಿಗದಿ ಪಡಿಸಿಲ್ಲ ಎಂದರು.

ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಾದಕವಸ್ತುಗಳ ವ್ಯಸನದಿಂದ ದೂರ ಇರಬೇಕು. ಬೆಂಗಳೂರಿನ ಶಾಲೆಯೊಂದರ ಮಕ್ಕಳ ಬ್ಯಾಗ್‌ನಲ್ಲಿ ಇತ್ತೀಚೆಗೆ ಗಾಂಜಾ, ಕಾಂಡೋಮ್ ದೊರೆತ್ತಿರುವುದು ಆಘಾತಕಾರಿ ವಿಚಾರ. ಈ ರೀತಿ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಎಂ.ಎಸ್. ಸಪ್ನ, ಪ್ರಾಧ್ಯಾಪಕರಾದ ಪುಟ್ಟಸ್ವಾಮಿ, ಮಮತಾ ಇದ್ದರು.