ನ್ಯೂಸ್

ಟೊಮೆಟೋ, ಕ್ಯಾಪ್ಸಿಕಂ ಬೆಳೆಗಳನ್ನು ಬೆಳೆಯಲು ಬಳಸುವ ನೀಲಗಿರಿ ಕೋಲುಗಳ ಬೆಲೆ ದುಬಾರಿ / ನೀಲಗಿರಿ ಬೆಳೆಯುವವರ ಸಂಖ್ಯೆ ಕಡಿಮೆ / ಒಂದು ಕೋಲಿನ ಬೆಲೆ ೩೫ ರಿಂದ ೪೦ ರೂ.ಗಳಿಗೆ ಮಾರಾಟ / ಬೆಳೆಗಾರರಿಗೆ ಸಂಕಷ್ಟ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಟೊಮೆಟೋ, ಕ್ಯಾಪ್ಸಿಕಂ ಮುಂತಾದ ತರಕಾರಿ ಬೆಳೆಗಳಿಗೆ ಬಳಸುವ ನೀಲಗಿರಿ ಕೋಲುಗಳ ಬೆಲೆ ಇತ್ತೀಚಿಗೆ ದುಬಾರಿಯಾಗಿದ್ದು, ಒಂದು ಕೋಲಿನ ಬೆಲೆ ೩೫ ರಿಂದ ೪೦ ರೂ.ಗಳ ತನಕ ಮಾರಾಟವಾಗುತ್ತಿದ್ದು, ಟೊಮೆಟೋ ಬೆಳೆಗಾರರನ್ನು ಸಂಕಷ್ಟಕ್ಕೆ ಈಡುಮಾಡಿದೆ.

ಕೋಲಾರ ಜಿಲ್ಲೆಯಲ್ಲಿ ನೀಲಗಿರಿಯನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದು, ಯಾವ ನೀರಾವರಿ ಮೂಲಗಳು ಇಲ್ಲದ ಕಾರಣ ನೀಲಗಿರಿಗೆ ಮಳೆ ಅವಶ್ಯಕತೆ ಕಡಿಮೆ ಇದ್ದರೂ ಪರವಾಗಿಲ್ಲ ಎಂದು ರೈತರು ನೀಲಗಿರಿಯನ್ನು ಹೊಲಗಳಲ್ಲಿ ಬೆಳೆಯುತ್ತಿದ್ದರು. ಅರಣ್ಯ ಇಲಾಖೆಯವರು ಅರಣ್ಯದಲ್ಲಿ ನೀಲಗಿರಿಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು.

ಅಂತರ್ಜಲ ಕುಸಿತಕ್ಕೆ ನೀಲಗಿರಿಯೇ ಮೂಲ ಕಾರಣ ಎಂದು ನೀಲಗಿರಿಯನ್ನು ನಿಷೇಧ ಮಾಡಬೇಕೆಂದು ಸರ್ಕಾರ ಆದೇಶ ಮಾಡಿದೆ. ವಿಶೇಷವಾಗಿ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಕುಸಿಯಲು ನೀಲಗಿರಿಯೇ ಕಾರಣ ಎಂದು ಜಿಲ್ಲಾಡಳಿತ ನೀಲಗಿರಿಯನ್ನು ನಿಷೇಧಿಸಿತು. ಅರಣ್ಯ ಇಲಾಖೆಯವರು ನೀಲಗಿರಿಯನ್ನು ತೆರವುಗೊಳಿಸಿ ವಿವಿಧ ಜಾತಿಯ ಮರಗಳನ್ನು ಬೆಳೆಸಲು ಮುಂದಾದರು.

ರೈತರು ಖಾಸಗಿಯಾಗಿ ಬೆಳೆಯುತ್ತಿದ್ದ ನೀಲಗಿರಿಯನ್ನು ಬುಡಸಮೇತ ಕಿತ್ತುಹಾಕಿದರು. ಈಗ ಶೇಕಡ ಜಿಲ್ಲೆಯಲ್ಲಿ ೮೦ ರಷ್ಟು ನೀಲಗಿರಿ ಬೆಳೆಯುವುದು ಕಡಿಮೆಯಾಗಿದೆ. ಪ್ರಸ್ತುತ ನೀಲಗಿರಿಗೆ ಮರಗಳಿಗೆ ಮತ್ತು ಕೋಲುಗಳಿಗೆ ಬಾರಿ ಬೇಡಿಕೆ ಹೆಚ್ಚಾಗಿದೆ.

ಕೆ.ಸಿ.ವ್ಯಾಲಿ ನೀರು ಕೋಲಾರ ಜಿಲ್ಲೆಯಲ್ಲಿ ಹರಿಯುತ್ತಿರುವುದರಿಂದ ಅಂತರ್ಜಲ ವೃದ್ಧಿಯಾಗಿದ್ದು, ರೈತರು ಟೊಮೆಟೋ ಸೇರಿದಂತೆ ತರಕಾರಿ ಬೆಳೆಯುವ ಬೆಳೆಗಾರರ ಸಂಖ್ಯೆ ಹೆಚ್ಚಾಗಿದೆ. ಟೊಮೆಟೋ, ಕ್ಯಾಪ್ಸಿಕಂ, ಸೌತೆಕಾಯಿ, ಬೀನ್ಸ್ ಮುಂತಾದ ಬೆಳೆಗಳನ್ನು ಬೆಳೆಯಲು ನೀಲಗಿರಿ ಕೋಲುಗಳ ಅವಶ್ಯಕತೆ ಇದೆ.

ಟೊಮೆಟೋ, ಕ್ಯಾಪ್ಸಿಕಂ ಮುಂತಾದ ಬೆಳೆಗಳ ಗಿಡಗಳು ನೆಲಕ್ಕೆ ಉರಳದಂತೆ ನೀಲಗಿರಿ ಕೋಲುಗಳನ್ನು ಆಧಾರವಾಗಿ ನೀಡಿ, ದಾರವನ್ನು ಕಟ್ಟುತ್ತಾರೆ. ಅದೇ ರೀತಿ ಎಲ್ಲಾ ಬೆಳೆಗಳಿಗೂ ನೀಲಗಿರಿ ಕೋಲುಗಳು ಅವಶ್ಯಕತೆ ಹೆಚ್ಚಾಗಿದೆ.

ಒಂದು ಎಕರೆ ಟೊಮೆಟೋ ಬೆಳೆಯಲು ೪ ಸಾವಿರ ನೀಲಗಿರಿ ಕೋಲುಗಳ ಅವಶ್ಯಕತೆ ಇದೆ. ಒಂದು ಕೋಲಿನ ಬೆಲೆ ೩೫ ರಿಂದ ೪೦ ರೂ.ಗಳು ಇದ್ದು, ಒಂದು ಎಕೆರೆ ಟೊಮೆಟೋ ಬೆಳೆಯಲು ೧ ಲಕ್ಷ ೪೦ ಸಾವಿರದಿಂದ ೧ ಲಕ್ಷ ೫೦ ಸಾವಿರ ರೂ.ಗಳು ನೀಲಗಿರಿ ಕೋಲುಗಳಿಗೆ ನೀಡಬೇಕಾಗುತ್ತದೆ. ಉಳಿದಂತೆ ಬೆಳೆ ಬೆಳೆಯಲು ಮಲ್ಚಿಂಗ್ ಪೇಪರ್, ಗೊಬ್ಬರ, ದಾರ, ಔಷಧಿ ಸೇರಿದಂತೆ ಒಂದು ಎಕರೆ ಟೊಮೆಟೋ ಬೆಳೆಯಲು ೫ ಲಕ್ಷದಿಂದ ೬ ಲಕ್ಷ ರೂ.ಗಳು ಖರ್ಚು ಬರುತ್ತದೆ.

ನೀಲಗಿರಿ ನಿಷೇಧ ಮಾಡಿರುವುದು ಒಳ್ಳೆಯದಾದರೂ ತರಕಾರಿ ಬೆಳೆಗಳಿಗೆ ನೀಲಗಿರಿ ಕೋಲುಗಳ ಅವಶ್ಯಕತೆ ಬೇಕಾಗಿರುವುದರಿಂದ ನೀಲಗಿರಿ ಕೋಲುಗಳಿಗೆ ಬಾರಿ ಬೇಡಿಕೆ ಹೆಚ್ಚಾಗಿದೆ. ನೀಲಗಿರಿ ಪೋಲ್ಸ್ಗಳಿಗೂ ಬಾರಿ ಬೇಡಿಕೆಯಾಗಿದೆ. ಜಿಲ್ಲೆಯಲ್ಲಿ ನೀಲಗಿರಿಯನ್ನು ನಿಷೇಧಿಸಿರುವುದಿರಿಂದ ನೀಲಗಿರಿ ನಾಟಿ ಮಾಡಲು ನೀಲಗಿರಿ ನಾರು ಸಿಗದಂತಾಗಿದೆ.

ಕೋಟ್

ನೀಲಗಿರಿಯಿಂದ ಅನಾನುಕೂಲವೂ ಇದೆ, ಅನುಕೂಲವೂ ಇದೆ. ನೀಲಗಿರಿ ಮರ ಮತ್ತು ಕೋಲುಗಳಿಗೆ ಇತ್ತೀಚೆಗೆ ಬಾರೀ ಬೇಡಿಕೆ ಇದೆ. ಅರಣ್ಯಗಳಲ್ಲಿ ನೀಲಗಿರಿಯನ್ನು ಬೆಳೆಯುತ್ತಿಲ್ಲ. ಖಾಸಗಿಯಾಗಿ ಬೆಳೆಯುತ್ತಿದ್ದ ರೈತರ ಸಂಖ್ಯೆಯೂ ಕಡಿಮೆಯಾಗಿದೆ. ಆದ್ದರಿಂದ ನೀಲಗಿರಿ ಕೋಲುಗಳಿಗೆ ಬೇಡಿಕೆ ಹೆಚ್ಚಾಗಿದೆ. ಸರ್ಕಾರ ಟೊಮೆಟೋ ಬೆಳೆಗಾರರಿಗೆ ನೀಲಗಿರಿ ಕೋಲುಗಳಿಗೆ ಪರ್ಯಾಯವಾಗಿ ಬಿದುರು ಅಥವಾ ಪ್ಲಾಸ್ಟಿಕ್ ಕೋಲುಗಳನ್ನು ತಯಾರು ಮಾಡುವ ಕೆಲಸ ಮಾಡಬೇಕಾಗಿದೆ. ದುಬಾರಿ ಬೆಲೆಯನ್ನು ನೀಡಿ, ನೀಲಗಿರಿ ಕೋಲುಗಳನ್ನು ಖರೀದಿ ಮಾಡಲು ಕಷ್ಟವಾಗುತ್ತಿದೆ.

-ಡಿ.ವಿ.ಜಿ.ಮಂಜು, ತರ‍್ನಹಳ್ಳಿ, ಟೊಮೆಟೋ ಬೆಳೆಗಾರ.

ಕೋಟ್

ಜನವರಿ, ಫೆಬ್ರವರಿ, ಮಾರ್ಚ್ ತಿಂಗಳುಗಳಲ್ಲಿ ಟೊಮೆಟೋವನ್ನು ಹೆಚ್ಚಾಗಿ ರೈತರು ನಾಟಿ ಮಾಡುತ್ತಾರೆ. ಮೇ, ಜೂನ್, ಜುಲೈ ತಿಂಗಳಿನಲ್ಲಿ ಟೊಮೆಟೋ ಸುಗ್ಗಿ ಇರುತ್ತದೆ. ಆಗ ಉತ್ತಮ ಬೆಲೆಯೂ ಬರುತ್ತದೆ ಎಂದು ಈಗಿನಿಂದಲೇ ಟೊಮೆಟೋ ನಾರನ್ನು ನಾಟಿ ಮಾಡಲು ರೈತರು ಮುಂದಾಗದ್ದಾರೆ. ಟೊಮೆಟೋ ಬೆಳೆಯಲು ನೀಲಗಿರಿ ಕೋಲುಗಳು ಅವಶ್ಯಕತೆ ಇದೆ. ಈಗ ನೀಲಗಿರಿಗೆ ಬಾರಿ ಬೇಡಿಕೆಯಾಗಿದೆ. ಟೊಮೆಟೋ ಸೇರಿದಂತೆ ತರಕಾರಿ ಬೆಳೆಗಳನ್ನು ಬೆಳೆಯಲು ಅವಶ್ಯಕತೆ ಇರುವ ಸಾಮಗ್ರಿಗಳ ಬೆಲೆ ದುಬಾರಿಯಾಗತೊಡಗಿದೆ.

-ರಾಜಶೇಖರ್, ರೈತ, ಅರಾಭಿಕೊತ್ತನೂರು.

ಚಿತ್ರ ೨೧ ಕೆ.ಎಲ್.ಆರ್. ೦೧ : ನೀಲಗಿರಿ ಕೋಲುಗಳನ್ನು ತಾಲ್ಲೂಕಿನ ಭಟ್ರಹಳ್ಳಿ ಸಮೀಪ ಮಾರಾಟ ಮಾಡುತ್ತಿರುವುದು.