ಹುಣಸೂರು ನಗರದಲ್ಲಿ ಗುರುಪುರ ಟಿಬೇಟಿಯನ್ ನಿರ್ವಸಿತರ ಕ್ಯಾಂಪಿನ ನಿವಾಸಿಗಳು ಮೌನ ಮೆರವಣಿಗೆ ನಡೆಸಿದರು. 
ನ್ಯೂಸ್

ಟಿಬೇಟಿಯನ್ನರ ಮೌನ ಮೆರವಣಿಗೆ

ಹುಣಸೂರು: ಟಿಬೇಟಿಯನ್ ಧರ್ಮಗುರು 14ನೇ ದಲೈಲಾಮರ ಕುರಿತು ಕೆಲ ಮಾಧ್ಯಮಗಳು ಅವಹೇಳಕನಕಾರಿ ವಿಷಯಗಳನ್ನು ಬಿತ್ತರಿಸಿವೆ ಎಂದು ಆರೋಪಿಸಿ ತಾಲೂಕಿನ ಗುರುಪುರ ಟಿಬೇಟಿಯನ್ ನಿರಾಶ್ರಿತರ ಕ್ಯಾಂಪ್‌ನ 100ಕ್ಕೂ ಹೆಚ್ಚು ಟಿಬೇಟಿಯನ್ನರು ಸೋಮವಾರ ಮೌನ ಮೆರವಣಿಗೆೆ ನಡೆಸಿದರು.
ನಗರದ ಸಂವಿಧಾನ ವೃತ್ತದಿಂದ ಎಚ್.ಡಿ.ಕೋಟೆ ವೃತ್ತದವರೆಗೆ ಮೌನ ಮೆರವಣಿಗೆ ನಡೆಸಿ ನಂತರ ಮುನೇಶ್ವರ ಕಾವಲ್ ಮೈದಾನದಲ್ಲಿ ಸೇರಿದರು. ಈ ವೇಳೆ ಮಾತನಾಡಿದ ಟಿಬೇಟಿಯನ್ ಪಾರ್ಲಿಮೆಂಟ್ ಸದಸ್ಯ ಮಿಜೋನ್ ದೋರ್ಜಿ, ಬೌದ್ಧ ಅನುಯಾಯಿಗಳ ವಿಶ್ವಪ್ರಸಿದ್ಧ ಧರ್ಮಗುರು 14ನೇ ದಲೈಲಾಮರನ್ನು ಕೆಲ ವಿದ್ಯುನ್ಮಾನ ಮಾಧ್ಯಮಗಳು ಬಾಲಕನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆಂದು ಸುದ್ದಿ ಮಾಡಿವೆ. ಇದು ನಮ್ಮ ಧರ್ಮಗುರುಗಳಿಗೆ ಮಾಡಿರುವ ಅಪಮಾನ. ವಿಶ್ವಾದ್ಯಂತ ಟಿಬೆಟ್ ದೇಶದ ಸ್ವಾತಂತ್ರ್ಯಕ್ಕಾಗಿನ ಅವರ ಶಾಂತಿಯುತ ಹೋರಾಟ ಮತ್ತು ಸೌಹಾರ್ದತೆ ಬಾಳ್ವೆಗಾಗಿ ದುಡಿಯುತ್ತಿರುವ ದಲೈಲಾಮರನ್ನು ಅಪಮಾನಿಸುವ ದುರುದ್ದೇಶದಿಂದ ಕೆಲ ಮಾಧ್ಯಮಗಳು ಈ ರೀತಿ ನಡೆದುಕೊಂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖಂಡರಾದ ತಾಶಿ ದುಂಡುಫ್, ಗುರುಪುರ ಸೆಟಲ್‌ಮೆಂಟ್ ಆಫೀಸರ್ ದಾವಾ, ಯೂತ್ ಕಾಂಗ್ರೆಸ್‌ನ ಎಂಒ ತೋಪ್ಡೆನ್ ಸೇರಿದಂತೆ 100ಕ್ಕೂ ಹೆಚ್ಚು ನಿವಾಸಿಗಳು ಮತ್ತು ಲಾಮಾಗಳು ಹಾಜರಿದ್ದರು.