ನ್ಯೂಸ್

ಸಿಟಿ ಬಸ್ ಮಾಲೀಕನಿಗೆ ವಿಮಾ ಮೊತ್ತ ನೀಡುವಂತೆ ಕಂಪನಿಗೆ ಆಯೋಗ ಆದೇಶ

ಶಿವಮೊಗ್ಗ: ಸಿಟಿ ಬಸ್ ಮಾಲೀಕನಿಗೆ ಅಪಘಾತದ ವಿಮಾ ಮೊತ್ತ ಪಾವತಿಸುವಂತೆ ವಿಮಾ ಕಂಪನಿಗೆ ಆದೇಶಿಸಿರುವ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ನೋಟಿಸ್ ನೀಡಿದ 45 ದಿನದೊಳಗೆ ಬಸ್ ರಿಪೇರಿಗೆ ಮಾಡಿದ ಖರ್ಚನ್ನು ಶೇ.8ರಷ್ಟು ಬಡ್ಡಿಯೊಂದಿಗೆ ನೀಡಬೇಕು. ಜತೆಗೆ ಪರಿಹಾರ ಮತ್ತು ಕೋರ್ಟ್ ವೆಚ್ಚವನ್ನೂ ಭರಿಸುವಂತೆ ಸೂಚಿಸಿದೆ.

ಎಸ್.ಎಂ.ಚೇತನ್ ಅವರು ವಿಮಾ ಕಂಪನಿ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡಿದವರು. 2018ರಲ್ಲಿ ರಾಘವೇಂದ್ರರಾವ್ ಅವರಿಂದ ಚೇತನ್ ಸಿಟಿ ಬಸ್ ಖರೀದಿ ಮಾಡಿದ್ದರು. ಖರೀದಿ ನಂತರ ಬಸ್‌ನ ಮಾಲೀಕತ್ವ ಮತ್ತು ವಿಮಾ ಪಾಲಿಸಿ ಅರ್ಜಿದಾರರ ಹೆಸರಿಗೆ ಬಂದಿದ್ದರೂ ರೂಟ್ ಪರ್ಮಿಟ್ ಮೂಲ ಮಾಲೀಕರಿಂದ ವರ್ಗಾವಣೆಗೊಂಡಿರಲಿಲ್ಲ. ಅದೇ ಬಸ್ ಅಪಘಾತಕ್ಕೀಡಾದ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದು, ಉದ್ರಿಕ್ತ ಗುಂಪು ಬಸ್ ಮೇಲೆ ಕಲ್ಲು ತೂರಿ ಗಾಜು, ಕಿಟಕಿ ಮತ್ತು ಇತರೆ ವಸ್ತುಗಳನ್ನು ಹಾನಿಗೊಳಿಸಿತ್ತು.

ಈ ಹಾನಿಗೆ ಸಂಬಂಧಿಸಿದ ಖರ್ಚನ್ನು ನೀಡುವಂತೆ ವಿಮಾ ಕಂಪನಿಗೆ ಕೋರಿದಾಗ ಪರ್ಮಿಟ್ ವರ್ಗಾವಣೆಗೊಂಡಿಲ್ಲದ ಕಾರಣ ವಿಮೆ ನೀಡಲು ಸಾಧ್ಯವಿಲ್ಲ ಎಂದು ನಿರಾಕರಿಸಿದ್ದು ಅರ್ಜಿದಾರರು ಸೂಕ್ತ ಪರಿಹಾರ ಕೋರಿ ಗ್ರಾಹಕರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬುಧವಾರ ಆಯೋಗದ ಶಿವಣ್ಣ ನೇತೃತ್ವದ ಪೀಠವು ದಾಖಲೆಗಳು, ವಾಸ್ತವಾಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅರ್ಜಿದಾರರಿಗೆ ಬಸ್ ರಿಪೇರಿ ಮಾಡಿಸಿದ ಖರ್ಚು 19,500 ರೂ.ಗಳನ್ನು ಶೇ.8ರಷ್ಟು ಬಡ್ಡಿ ಸೇರಿಸಿ ನೋಟಿಸ್ ನೀಡಿದ 45 ದಿನಗಳ ಒಳಗೆ ಹಿಂತಿರುಗಿಸಬೇಕು. 10,000 ರೂ. ಪರಿಹಾರ ಮತ್ತು 5,000 ರೂ. ಕೋರ್ಟಿನ ವೆಚ್ಚವನ್ನೂ ನೀಡಬೇಕೆಂದು ಆದೇಶಿಸಿದೆ.