ಬೆಟ್ಟದಪುರ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತಿಯೊಂದು ವಿಷಯದಲ್ಲಿಯೂ ಜಾಗೃತರಾಗುವ ಮೂಲಕ ಜ್ಞಾನದ ಎಲ್ಲ ಮೂಲಗಳಿಗೆ ಮುಕ್ತರಾಗಿರಬೇಕು ಎಂದು ಕವಿ ಹೇಮಚಂದ್ರ ದಾಳಗೌಡನಹಳ್ಳಿ ಸಲಹೆ ನೀಡಿದರು.
ಬೆಟ್ಟದಪುರ ಸಮೀಪದ ಕಿತ್ತೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆ, ಸ್ಕೌಟ್ ಮತ್ತು ಗೈಡ್ಸ್, ಇಕೋ ಕ್ಲಬ್ ಉದ್ಟಾಟನೆ ಹಾಗೂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಯೊಂದಿಗೆ ಇಂದಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು. ನಿರಂತರ ಅಭ್ಯಾಸಕ್ಕೆ ಖಂಡಿತವಾಗಿ ಯಶಸ್ಸು ಸಿಗಲಿದೆ. ಹಾಗಾಗಿ ಏಕಾಗ್ರತೆಯಿಂದ ಅಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸಬೇಕಾದ ಅನಿವಾರ್ಯತೆಯನ್ನು ಅರಿತು, ಅದರ ಉಳಿವಿಗಾಗಿ ಪ್ರತಿಯೊಬ್ಬರೂ ಶ್ರಮವಹಿಸಬೇಕು ಎಂದರು.
ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಮಾತ್ರ ಸೀಮಿತವಾಗದೆ ಶಿಸ್ತು, ಸಂಸ್ಕಾರ ರೂಢಿಸಿಕೊಂಡು ಮಾನವೀಯತೆಯ ಬದುಕನ್ನು ರೂಪಿಸಿಕೊಳ್ಳಬೇಕು. ಯುವಜನಾಂಗ ಮತ್ತು ವಿದ್ಯಾರ್ಥಿಗಳು ಕಂಪ್ಯೂಟರ್, ದೃಶ್ಯ ಮಾಧ್ಯಮಗಳನ್ನು ಅಗತ್ಯಕ್ಕೆ ತಕ್ಕಂತೆ ಮಾತ್ರ ಸದುಪಯೋಗ ಪಡಿಸಿಕೊಳ್ಳಬೇಕು. ಅವುಗಳಿಗೆ ದಾಸರಾಗದೆ ಹಿಡಿತದಲ್ಲಿಟ್ಟುಕೊಂಡು ಅಗತ್ಯ ಬಿದ್ದಾಗ ಉಪಯೋಗಿಸಿಕೊಳ್ಳಬೇಕು ಎಂದರು.
ಕಾಲೇಜು ಆಡಳಿತ ಮಂಡಳಿ ವತಿಯಿಂದ ಕವಿ ಹೇಮಚಂದ್ರ ದಾಳಗೌಡನಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಚಲನಚಿತ್ರ ಗೀತೆಗಳಿಗೆ ನೃತ್ಯ ಹಾಗೂ ವಿವಿಧ ಏಕಪಾತ್ರ ಅಭಿನಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಹದೇವಿ, ಸವಿತಾ, ಪ್ರಾಂಶುಪಾಲ ರವಿಕುಮಾರ್, ಉಪನ್ಯಾಸಕರಾದ ಜಯರಾಮ್, ಮಂಜುನಾಥ್, ಮಲ್ಲೇಶ್, ಮಹೇಶ್, ಸತೀಶ್, ರವಿ, ನಂಜುಂಡೇಗೌಡ, ಆರತಿ, ಯಶ್ವಂತ್, ಮಹದೇವ, ಪ್ರೌಢಶಾಲೆ ಮುಖ್ಯಶಿಕ್ಷಕ ಹರೀಶ್ ಹಾಗೂ ವಿದ್ಯಾರ್ಥಿಗಳು ಇದ್ದರು.