ಕಿಕ್ಕೇರಿ ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಎಸ್.ಕೆ. ದೇವರಾಜು ಮಾತನಾಡಿದರು. ಚಲುವನಾರಾಯಣಸ್ವಾಮಿ, ಎಸ್.ಎಂ. ಬಸವರಾಜು, ಬಿ.ಎನ್. ಪರಶಿವಮೂರ್ತಿ, ಸುರೇಶ್, ದೀಪಕ್, ಪ್ರಸನ್ನ, ಶ್ರೀಕಾಂತ್ ಚಿಮ್ಮಲ್ ಇದ್ದರು. 
ನ್ಯೂಸ್

ಜ್ಞಾನಕ್ಕಾಗಿ ಪತ್ರಿಕೆ, ಪುಸ್ತಕ ಓದಿ

 ಕಿಕ್ಕೇರಿ : ಪತ್ರಿಕೆ, ಪುಸ್ತಕಗಳನ್ನು ಓದುವುದರಿಂದ ವ್ಯಕ್ತಿತ್ವ ವಿಕಸನ, ಹೆಚ್ಚು ಕಾಲ ನೆನಪಿನಲ್ಲಿ ಉಳಿಯಲಿದೆ ಎಂದು ಶಿಕ್ಷಕ ದಯಾನಂದ ಕುಮಾರ್ ತಿಳಿಸಿದರು.

ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಜ್ಞಾನಕ್ಕಾಗಿ ಪತ್ರಿಕೆ, ಪುಸ್ತಕ ಓದಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದು ಸ್ಪರ್ಧಾಯುಗ ಎಂದು ಮೊಬೈಲ್ ಹಿಡಿದು ಕುಳಿತರೆ ಜ್ಞಾನ ವೃದ್ಧಿಯಾಗಲಾರದು. ಪತ್ರಿಕೆ, ಪುಸ್ತಕಗಳು ಮೆದುಳಿಗೆ ಔಷಧದಂತೆ ಕೆಲಸ ಮಾಡಲಿವೆ. ಪಾಲಕರು ಮಕ್ಕಳಿಗೆ ಓದುವ ಕಡೆ ಕಾಳಜಿ ವಹಿಸಬೇಕು ಸೂಚಿಸಿದರು.

ಗ್ರಾಮಕ್ಕೆ ಹೊಂದಿಕೊಂಡಿರುವ ತೆಂಗಿನಘಟ್ಟ ಗ್ರಾಮದವರಾದ ಲೋಕಾಯುಕ್ತ ಇಲಾಖೆಯ ಅಧಿಕಾರಿ ರಾಜಶೆಟ್ಟಿ ತಮ್ಮ ತಂದೆ ಕೆಂದಪ್ಪಶೆಟ್ಟಿ ಜ್ಞಾಪಕಾರ್ಥ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಅನುಕೂಲವಾಗಲು ಪಠ್ಯ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಇದು ತಮ್ಮೂರ ಶಾಲೆ, ಮಕ್ಕಳ ಮೇಲೆ ಇಟ್ಟಿರುವ ಅಭಿಮಾನ. ಮಕ್ಕಳು ಸದ್ಬಳಕೆ ಮಾಡಿಕೊಳ್ಳಿ. ಹಳ್ಳಿಯ ಮಕ್ಕಳು ದೊಡ್ಡ ಅಧಿಕಾರಿಗಳು ಆಗಬಹುದು ಎನ್ನುವುದಕ್ಕೆ ಇವರ ಪರಿಶ್ರಮದ ಓದನ್ನು ಮಾದರಿಯಾಗಿ ತೆಗೆದುಕೊಳ್ಳಿ ಎಂದರು.

ಸರ್ಕಾರಿ ಶಾಲೆ, ಕನ್ನಡ ಶಾಲೆ ಬಡಮಕ್ಕಳ ಬದುಕಿನ ಬಲುದೊಡ್ಡ ಆಸ್ತಿಯಾಗಿದೆ. ಸರ್ಕಾರಿ ಶಾಲೆ ಉಳಿಯಲು ಪಾಲಕರು ಸಹಕರಿಸಿ. ಉತ್ತಮ ಬೋಧನೆ, ಪರಿಸರ, ಉಚಿತವಾಗಿ ಎಲ್ಲವೂ ಗುಣಮಟ್ಟದೊಂದಿಗೆ ಸಿಗುವಾಗ ಖಾಸಗಿ ಶಿಕ್ಷಣ ಸಂಸ್ಥೆಯ ಶಾಲೆ ವ್ಯಾಮೋಹ ಏಕೆ ಎನ್ನುವ ಪ್ರಶ್ನೆ ಕಾಡುವಂತಾಗಿದೆ ಎಂದು ಬೇಸರಿಸಿದರು.

ಮುಖ್ಯಶಿಕ್ಷಕ ನಟರಾಜು, ಸೀತಾರಾಮು, ಶಿಕ್ಷಕ ನಟರಾಜು, ಎಚ್.ಸಿ. ನಂಜಪ್ಪ, ಲೋಕೇಶ್, ನಂದನ್ ಇದ್ದರು.