ನ್ಯೂಸ್

ಜ್ಞಾನ ಮಾರ್ಗದಲ್ಲಿ ನಡೆದರೆ ಬದುಕಿನಲ್ಲಿ ಶಾಂತಿ

ಸ್ವಧರ್ಮವೇ ಶಾಂತಿ. ಜ್ಞಾನ ಮಾರ್ಗದಲ್ಲಿ ನಡೆಯುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿಯ ಈಶ್ವರೀಯ ವಿಶ್ವವಿದ್ಯಾನಿಲಯದ ಮೈಸೂರು ಉಪ ವಲಯದ ಮುಖ್ಯ ಸಂಚಾಲಕಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ ತಿಳಿಸಿದರು.

ಮೈಸೂರು ತಾಲೂಕಿನ ಲಿಂಗದೇವರು ಕೊಪ್ಪಲಿನಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಜ್ಞಾನ ಸರೋವರ ರಿಟ್ರೀಟ್ ಸೆಂಟರ್‌ನಲ್ಲಿ ಭಾನುವಾರ ಆಯೋಜಿಸಿದ್ದ ‘ಅಧ್ಯಾತ್ಮಿಕ ಸಶಕ್ತೀಕರಣದಿಂದ ಸ್ವಚ್ಛ ಮತ್ತು ಆರೋಗ್ಯಕರ ಸಮಾಜದ ನಿರ್ಮಾಣ: ಕೊಚ್ಚಿಯಿಂದ ಮೈಸೂರಿನ ತನಕ ಅಭಿಯಾನ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಶಾಂತಿ ಮತ್ತು ಪ್ರೀತಿಯಿಂದ, ಸಮಾಧಾನಚಿತ್ತದಿಂದ, ಶುಭ ಚಿತ್ತದಿಂದ ಸಮಾಜ ಸೇವೆಗೆ ಮುಂದಾಗಬೇಕು. ನಮ್ಮ ಮನಸ್ಸಿನ ಪರಿಶುದ್ಧತೆ, ಸದ್ಭಾವನೆ ಬದುಕಿಗೆ ಅಗತ್ಯ ಎಂದರು.

ಕರ್ಮದಲ್ಲಿ ಮೂರು ವಿಧ. ಅಕರ್ಮ, ಸುಕರ್ಮ ಮತ್ತು ವಿಕರ್ಮ. ಬದುಕಿದ್ದಾಗ ಯಾವ ಕರ್ಮ ಮಾಡುತ್ತೇವೆ ಅದನ್ನು ದೇಹವನ್ನು ಪರಿತ್ಯಾಗ ಮಾಡಿದಾಗ ತೆಗೆದುಕೊಂಡು ಹೋಗುತ್ತೇವೆ. ದೇಹದಲ್ಲಿರುವ ಚೇತನ ಹೊರಟು ಹೋದರೆ ಯಾವುದೂ ನಮ್ಮ ಜತೆ ಬರುವುದಿಲ್ಲ. ಸಮಾಜಕ್ಕೆ ಕೊಟ್ಟ ಕೊಡುಗೆ ನಮ್ಮೊಂದಿಗೆ ಬರುತ್ತದೆ ಎಂದು ಹೇಳಿದರು.

ಈಚೆಗೆ ನಿಧನರಾದ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಕೊಡುಗೆಗಳನ್ನು ಗುಣಗಾನ ಮಾಡಲಾಯಿತು. ಪತ್ರಿಕೆಗಳಲ್ಲಿ ಅವರ ಕೊಡುಗೆಗಳ ಬಗ್ಗೆ ಬರೆಯಲಾಯಿತು. ನಮ್ಮೆಲ್ಲರ ಬದುಕು ನಾವು ಕಾಲವಾದ ನಂತರವೂ ಸ್ಮರಿಸುವಂತಿರಬೇಕು ಎಂದು ತಿಳಿಸಿದರು.

ಅರಿಷಡ್ವರ್ಗಗಳ ದಾಸರಾದರೆ, ಅಹಂಕಾರದಿಂದ ವರ್ತಿಸಿದರೆ ಅದರ ಪ್ರತಿಫಲನವನ್ನು ನಾನಾ ಕಷ್ಟಗಳ ರೂಪದಲ್ಲಿ ಪಡೆಯುತ್ತೇವೆ. ದುಃಖ ದುಮ್ಮಾನಗಳು ನಮ್ಮ ಬದುಕಿನಲ್ಲಿ ಎದುರಾಗುತ್ತೇವೆ. ವೈಯಕ್ತಿಕ ಬದುಕು ಶುದ್ಧವಾಗಿಟ್ಟುಕೊಂಡು ಸಮಾಜಕ್ಕೆ ಒಳ್ಳೆಯದು ಮಾಡುವ ಸಂಕಲ್ಪ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮುಂಬಯಿನ ಶೈಕ್ಷಣಿಕ ತರಬೇತುದಾರ ಡಾ.ಇ.ವಿ. ಸ್ವಾಮಿನಾಥನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜ್ಞಾನ ಸರೋವರ ಸಂಚಾಲಕಿ ಶಾರದಾಜೀ ರಾಜಯೋಗ ಧ್ಯಾನ ಹೇಳಿಕೊಟ್ಟರು. ಚಾಮರಾಜನಗರದ ಸಂಚಾಲಕಿ ದಾನೇಶ್ವರಿ ಪ್ರತಿಜ್ಞಾವಿಧಿ ಬೋಧಿಸಿದರು.

ಮಾಜಿ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಜಿಲ್ಲಾ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್.ರಮೇಶ್, ಅಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ನಿರ್ದೇಶಕ ಡಾ.ನಾಗರಾಜ ಬೈರಿ, ಗಾಯಕ ಅಮ್ಮ ರಾಮಚಂದ್ರ, ಸಂಚಾಲಕಿ ಶಿವಲೀಲಾ, ಶಾಸ್ತ್ರೀಯ ಸಂಗೀತಗಾರ ಆರ್.ಕೆ.ಪದ್ಮನಾಭ, ಡಾ.ಸ್ವಾಮಿನಾಥನ್ ಬಾಯಿ, ಡಾ.ಗಿರೀಶ್ ಭಾಯಿ, ಬಾಬು ಭಾಯಿ, ಬೀರೇಂದ್ರ ಬಾಯಿ, ರಾಜು ಬಾಯಿ ಇತರರು ಇದ್ದರು.