ಹಾಸನ: ಮುಸುಕಿನ ಜೋಳಕ್ಕೆ ತಗುಲಿರುವ ಬಿಳಿಸುಳಿ ರೋಗ ಬಾಧೆ ಹತೋಟಿಗೆ ಕೃಷಿ ಇಲಾಖೆ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ರೈತರಿಗೆ ಜಾಗೃತಿ ಮೂಡಿಸುವಂತೆ ಸಂಸದ ಶ್ರೇಯಸ್ ಪಟೇಲ್ ಅವರು ಸೂಚಿಸಿದರು.
ನಗರದ ಕೃಷಿ ಇಲಾಖೆಯಲ್ಲಿ ಬಿಳಿ ಸುಳಿ ರೋಗಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಅಧಿಕಾರಿಗಳು, ವರ್ತಕರೊಂದಿಗೆ ಸೋಮವಾರ ಸಂಜೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬಿಳಿಸುಳಿ ರೋಗದ ಬಗ್ಗೆ ಹಾಗು ಹತೋಟಿ ಕ್ರಮಗಳ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಿಂದ ಮಾಹಿತಿ ನೀಡುವ ಕೆಲಸವಾಗಬೇಕು. ರೋಗ ನಿಯಂತ್ರಣಕ್ಕೆ ಬೇಕಾದ ಔಷಧ ಪೂರೈಕೆ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ತಿಳಿಸಿದರು.
ಕೃಷಿ ಜಂಟಿ ನಿರ್ದೇಶಕ ಡಾ.ರಮೇಶ್ ಕುಮಾರ್ ಅವರು ಮಾತನಾಡಿ, ಜಿಲ್ಲೆಗೆ ಅಂದಾಜು 10 ಸಾವಿರ ಕ್ವಿಂಟಾಲ್ ಬಿತ್ತನೆ ಮುಸುಕಿನ ಜೋಳದ ಅಗತ್ಯವಿದೆ. ಇದರಲ್ಲಿ ಶೇ.95 ರಷ್ಟು ಖಾಸಗಿ ಸಂಸ್ಥೆಗಳಿಂದಲೇ ಬಿತ್ತನೆ ಬೀಜ ಮಾರಾಟ ಮಾಡಲಾಗುತ್ತದೆ. ಕೃಷಿ ಇಲಾಖೆಯಿಂದ ಈವರೆಗೆ ಶೇ.5ರಷ್ಟು ಮಾತ್ರ ಬಿತ್ತನೆ ಬೀಜ ವಿತರಣೆ ಮಾಡಿದ್ದೇವೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಸುಳಿ ರೋಗ ಕಾಣಿಸಿಕೊಂಡಿರುವುದರಿಂದ ಹತೋಟಿ ಕ್ರಮಗಳ ಬಗ್ಗೆ ಭಿತ್ತಿ ಪತ್ರಗಳ ಮೂಲಕ ರೈತರಿಗೆ ಜಾಗೃತಿ ಮೂಡಿಸುವ ಕೆಲಸವಾಗಿದೆ. ಅಲ್ಲದೇ 143 ಗ್ರಾಮಗಳಲ್ಲಿ ರೈತರೊಂದಿಗೆ ಸಭೆ ನಡೆಸಿ ಮಾಹಿತಿ ನೀಡುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಈವರೆಗೂ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ. ಇದರಲ್ಲಿ 8 ಸಾವಿರಕ್ಕೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಬೆಳೆಯಲ್ಲಿ ಬಿಳಿ ಸುಳಿ ರೋಗ ಕಾಣಿಸಿಕೊಂಡಿದೆ. ಹಾಸನ ತಾಲೂಕಿನ 6 ಸಾವಿರ ಹೆಕ್ಟೇರ್, ಹೊಳೆನರಸೀಪುರ ತಾಲೂಕಿನಲ್ಲಿ 1 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಈ ರೋಗ ಕಾಣಿಸಿಕೊಂಡಿದೆ ಎಂದು ತಿಳಿಸಿದರು.
ಈ ವರ್ಷ ಪೂರ್ವ ಮುಂಗಾರಿನಲ್ಲಿ ಅಧಿಕ ಪ್ರಮಾಣದ ಮಳೆಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ ವಾಡಿಕೆಯಂತೆ 247 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಈ ಬಾರಿ 820 ಮಿ.ಮೀ. ಮಳೆಯಾಗಿದೆ. ವಾಡಿಕೆಗಿಂತ ಶೇ.232 ರಷ್ಟು ಹೆಚ್ಚಳ ಮಳೆಯಾಗಿದೆ. ಉಳಿದ ತಾಲೂಕುಗಳಲ್ಲೂ ಶೇ.65 ರಿಂದ 90 ರಷ್ಟು ಹೆಚ್ಚಿಗೆ ಮಳೆಯಾಗಿದೆ. ಹೀಗಾಗಿ ಈಗಾಗಲೇ ಬಹುತೇಕ ಕಡೆ ಮುಂಗಾರು ಬಿತ್ತನೆ ಕಾರ್ಯ ಆರಂಭವಾಗಿದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು 1.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆಯಲಾಗುತ್ತದೆ. ನಂತರ ರಾಗಿ 85 ಸಾವಿರ ಹೆಕ್ಟೇರ್ ಪ್ರದೇಶ, ಭತ್ತವನ್ನು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಈಗಾಗಲೇ 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಕಾರ್ಯ ನಡೆದಿದೆ ಎಂದು ಮಾಹಿತಿ ನೀಡಿದರು.