ನ್ಯೂಸ್

ಜೈಲಿನಲ್ಲಿ ತಮ್ಮನಿಗೂ ಸಿಗಲಿ ಸೌಲಭ್ಯ

ಚಿತ್ರದುರ್ಗ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ಚಿತ್ರದುರ್ಗದ ರಾಘವೇಂದ್ರ ಆಲಿಯಾಸ್ ರಘುಗೂ ನಟ ದರ್ಶನ್‌ಗೆ ಸಿಕ್ಕಂತೆ ಆದ್ಯತೆ (ಆತಿಥ್ಯ) ಸಿಗಬೇಕು ಎಂದು ಆತನ ಸಹೋದರ ಮುರಳಿ ಒತ್ತಾಯಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದರ್ಶನ್ ಜೈಲಿನೊಳಗೆ ಹೇಗಿದ್ದಾರೋ ಅದೇ ರೀತಿ ಪ್ರಕರಣದ ಉಳಿದೆಲ್ಲ ಆರೋಪಿತರನ್ನೂ ನೋಡಿಕೊಳ್ಳಬೇಕು. ಈ ಕುರಿತು ದರ್ಶನ್ ಕಡೆಯವರು ಗಮನಹರಿಸಬೇಕು ಎಂದರು.

ನನ್ನ ಮತ್ತೊಬ್ಬ ಸಹೋದರನಿಗೆ ರಘು ವಿಡಿಯೋ ಕರೆ ಮಾಡಿದ್ದು, ನಾನು ಆರೋಗ್ಯವಾಗಿದ್ದೇನೆ. ಆದಷ್ಟು ಬೇಗ ಜಾಮೀನು ಮೂಲಕ ಹೊರಗೆ ಬರುವುದಾಗಿ, ಕುಟುಂಬಸ್ಥರು ಧೈರ್ಯವಾಗಿ ಇರುವಂತೆ ಹೇಳಿದ್ದಾನೆ ಎಂದು ತಿಳಿಸಿದರು.

ತಾಯಿ ಮೃತಪಟ್ಟ ವೇಳೆ ಅಂತ್ಯಕ್ರಿಯೆಗಾಗಿ ದರ್ಶನ್ ಕಡೆಯವರು 25 ಸಾವಿರ ರೂ. ನೀಡಿದ್ದರು. ಆನಂತರ ರಘು ಪತ್ನಿಗೆ ನೆರವು ನೀಡುತ್ತಿದ್ದಾರೆ. ನಮ್ಮನ್ನು ಸಂಪರ್ಕಿಸಿಲ್ಲ. ಜೈಲಿನಲ್ಲಿ ಸಿಗರೇಟ್, ಮದ್ಯ ಕೊಡಬೇಕೆಂಬುದು ನನ್ನ ಒತ್ತಾಯವಲ್ಲ. ಜಾಮೀನು ಮೂಲಕ ಹೊರಗೆ ಕರೆತರಲು ಪ್ರಯತ್ನಿಸಬೇಕು. ನಮ್ಮ ಕುಟುಂಬಕ್ಕೆ ನೆರವು ನೀಡಬೇಕು ಎಂದು ಆಗ್ರಹಿಸಿದರು.

ಜೈಲುಗಳು ಪರಿವರ್ತನೆ ತಾಣವಾಗಲಿ: ಕೊಲೆ, ಅತ್ಯಾಚಾರ, ಸುಲಿಗೆ, ದೌರ್ಜನ್ಯ ಮಾಡಿದವರಿಗೆ ರಾಜ್ಯದ ಜೈಲುಗಳು ಪರಿವರ್ತನೆಯ ತಾಣವಾಗಬೇಕೆ ಹೊರತು ರೆಸಾರ್ಟ್, ಅರಮನೆ ಮಾದರಿಯಲ್ಲಿ ರಾಜಾತಿಥ್ಯ ನೀಡುವಂತಾಗಬಾರದು ಎಂದು ರೇಣುಕಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ್ರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.