ಕಾರ್ಗಲ್: ಸಮೀಪದ ಮರಬಿಡಿ ಸೀಮೆಯ ಬಿದರೂರು ಶ್ರೀ ವರ್ಧಮಾನ ದಿಗಂಬರ ಜೈನ ಬಸದಿಯಲ್ಲಿ 10 ದಿನ ನಡೆಯುವ ದಶಲಕ್ಷಣ ಮಹಾಪರ್ವದ ಪೂಜಾ ಕಾರ್ಯ ಬುಧವಾರ ದಶಲಕ್ಷಣ ಪೂಜಾ ಕಳಶ ಸ್ಥಾಪನೆಯೊಂದಿಗೆ ಆರಂಭಗೊಂಡಿತು. ಸೆ.29ರವರೆಗೆ ಕಾರ್ಯಕ್ರಮಗಳು ನೆರವೇರಲಿವೆ.
ಸೋಂದಾ ಶ್ರೀಸ್ವಾದಿ ದಿಗಂಬರ ಜೈನ ಮಠದ ಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಆತ್ಮದ ಸ್ಥಾನ ಭದ್ರಪಡಿಸುವ ಮೂಲಕ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಲು ಜೈನಧರ್ಮದಲ್ಲಿ ದಶಲಕ್ಷಣ ಮಹಾಪರ್ವ ಸ್ಥಾಪನೆಯ ಪೂಜಾ ವಿಧಾನ ವಿಶೇಷ ಮಹತ್ವ ಪಡೆದುಕೊಂಡಿದೆ. ದಶಲಕ್ಷಣದ ಹತ್ತು ಮೆಟ್ಟಿಲುಗಳ ಪೈಕಿ ಮೊದಲನೇ ಪೂಜೆಯಾದ ಉತ್ತಮ ಕ್ಷಮಾ ಧರ್ಮ ಪೂಜೆ ನೆರವೇರಿಸಲಾಯಿತು ಎಂದು ಅರ್ಚಕ ವಿದ್ಯಾಧರ ಇಂದ್ರ ಬಿದರೂರು ತಿಳಿಸಿದರು. ಪ್ರತಿನಿತ್ಯ ದಶಲಕ್ಷಣದ ಒಂದೊಂದು ಪೂಜೆಗಳು 10 ದಿನಗಳ ಕಾಲ ನೆರವೇರಲಿದೆ ಎಂದರು.
ಗುರುವಾರ ಉತ್ತಮ ಮಾರ್ದವ ಧರ್ಮ ಪೂಜೆ, ಶುಕ್ರವಾರ ಉತ್ತಮ ಆರ್ಜವ ಧರ್ಮ ಪೂಜೆ, ಶನಿವಾರ ಉತ್ತಮ ಸತ್ಯ ಧರ್ಮ ಪೂಜೆ, ಭಾನುವಾರ ಉತ್ತಮ ಶೌಚ ಧರ್ಮ ಪೂಜೆ, ಸೋಮವಾರ ಉತ್ತಮ ಸಂಯಮ ಧರ್ಮ ಪೂಜೆ, ಮಂಗಳವಾರ ಉತ್ತಮ ತಪ ಧರ್ಮ ಪೂಜೆ, ಬುಧವಾರ ಉತ್ತಮ ತ್ಯಾಗ ಧರ್ಮ ಪೂಜೆ, ಗುರುವಾರ ಉತ್ತಮ ಆಕಿಂಜನ್ಯ ಧರ್ಮ ಹಾಗೂ ಅನಂತ ಚತುರ್ದಶಿ ಪೂಜೆ, ಶುಕ್ರವಾರ ಉತ್ತಮ ಬ್ರಹ್ಮಚರ್ಯ ಧರ್ಮ ಪೂಜೆ 10 ದಿನಗಳ ಕಾಲ ನಡೆಯಲಿದೆ ಎಂದು ಅರ್ಚಕ ಮೋಹನ್ ಕುಮಾರ್ ಬಿದರೂರು ತಿಳಿಸಿದರು.
ಹತ್ತನೇ ದಿವಸ 108 ಕಳಶ ಅಭಿಷೇಕ, ದಶಲಕ್ಷಣ ವಿಸರ್ಜನೆ ಹಾಗೂ ಕ್ಷಮಾವಾಣಿ ನೆರವೇರಲಿದೆ ಎಂದರು ಎಂದು ಬಿದರೂರು ಜೈನ ಬಸದಿ ಆಡಳಿತ ಸಮಿತಿ ಕಾರ್ಯದರ್ಶಿ ಲೋಕರಾಜ್ ವಡನ್‌ಬೈಲು ತಿಳಿಸಿದರು.