ಜಯಚಾಮರಾಜೇಂದ್ರ ಆಸ್ಪತ್ರೆ.  
ನ್ಯೂಸ್

ಜೆಸಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ

ತೀರ್ಥಹಳ್ಳಿ: ಇಲ್ಲಿನ ತಾಲೂಕು ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರೂ ಸೇರಿ ಪ್ರಯೋಗಾಲಯ ತಂತ್ರಜ್ಞರ ಹುದ್ದೆ ಮತ್ತು ಉಳಿದ ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. 100 ಬೆಡ್ ಆಸ್ಪತ್ರೆಯ 95 ಹುದ್ದೆಗಳಲ್ಲಿ ಬರೋಬ್ಬರಿ 54 ಹುದ್ದೆಗಳು ಖಾಲಿ ಇವೆ. ವೈದ್ಯರು, ಸಿಬ್ಬಂದಿ ವರ್ಗಾವಣೆ ಪ್ರಕ್ರಿಯೆ ನಂತರ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. 10 ವರ್ಷ ಮೀರಿದ ಸಿಬ್ಬಂದಿ ಬೇರೆ ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡು ವರ್ಗವಾಗಿದ್ದಾರೆ. ಇಲ್ಲಿಂದ ವರ್ಗಾವಣೆಯಾಗುವ ಎಲ್ಲ ಸ್ಥಾನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದ ಹೊರತು ಸಿಬ್ಬಂದಿಯನ್ನು ವರ್ಗಾವಣೆ ಮಾಡಬಾರದು ಎಂದು ಸಾರ್ವಜನಿಕರಿಂದ ಪ್ರತಿಭಟನೆಯೂ ನಡೆದಿತ್ತು. ಆದರೆ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ.

ತಾಲೂಕು ಆಸ್ಪತ್ರೆಯಲ್ಲಿ ತೆರವಾಗಿರುವ ಸ್ಥಾನಗಳಿಗೆ ನೇಮಕವಾಗಿ ಬರಬೇಕಿದ್ದ ವೈದ್ಯರಲ್ಲಿ ಕೆಲವರು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ. ಇದಕ್ಕೆ ಕೆಲವು ಆಡಳಿತಾತ್ಮಕ, ತಾಂತ್ರಿಕ ಅಡಚಣೆಗಳು ಇದ್ದು ಕೆಲವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ರಜೆಯಲ್ಲಿ ಇದ್ದಾರೆ ಎನ್ನಲಾಗಿದೆ. ಇದರಿಂದ ಉಳಿದ ಸಿಬ್ಬಂದಿಗೆ ಕಾರ್ಯದೊತ್ತಡ ಹೆಚ್ಚಾಗಿದೆ. ಪ್ರತಿದಿನ ಅಂದಾಜು 500 ಹೊರರೋಗಿಗಳ ವಿಭಾಗಕ್ಕೆ ಬರುತ್ತಾರೆ. ನಿರ್ವಹಣೆ ಮಾಡುವುದು ಕಷ್ಟ ಸಾಧ್ಯವಾಗಿದೆ.

ಅರಿವಳಿಕೆ ತಜ್ಞ ವೈದ್ಯರು ಕೌನ್ಸೆಲಿಂಗ್‌ನಲ್ಲಿ ಈ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಂಡಿದ್ದು, ನಂತರ ವರದಿ ಮಾಡಿಕೊಂಡಿಲ್ಲ. ಇದರಿಂದ ಪ್ರಸವ ಮತ್ತಿತರ ಅಪರೇಷನ್‌ಗಳಿಗೆ ತೀವ್ರ ಹಿನ್ನಡೆಯಾಗಿದೆ. ನೇತ್ರ ತಜ್ಞರು ಹಾಗೂ ನೇತ್ರಾಧಿಕಾರಿ ಸ್ಥಾನ ಭರ್ತಿಯಾಗಿಲ್ಲ. ತುರ್ತು ಚಿಕಿತ್ಸಾ ವಿಭಾಗದಲ್ಲಿ 4 ಮಂದಿ ವೈದ್ಯರಲ್ಲಿ ಕೇವಲ ಒಬ್ಬ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು ಮೂರು ಸ್ಥಾನ ಖಾಲಿ ಇವೆ. ಮುಖ್ಯವಾಗಿ ಈ ಆಸ್ಪತ್ರೆಯಲ್ಲಿ ಇಬ್ಬರು ಲ್ಯಾಬ್ ಟೆಕ್ನೀಷಿಯನ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಇರುವ ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತರಾದರೂ ಟೆಕ್ನೀಷಿಯನ್ ಕೊರತೆಯಿಂದ ರಕ್ತ ತಪಾಸಣೆ ವರದಿಗೆ ಆಸ್ಪತ್ರೆಯಲ್ಲಿ ರೋಗಿಗಳು ಕಾಯುವ ಸ್ಥಿತಿ ಇದೆ.