ನ್ಯೂಸ್

ಜೆಡಿಎಸ್‌ನಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭ

ಶಿರಾ, ರಾಜರಾಜೇಶ್ವರಿ ನಗರ ಉಪ ಸಮರ:

ಜೆಡಿಎಸ್‌ನಿಂದ ಅಭ್ಯರ್ಥಿಗಳ ಆಯ್ಕೆ ಕಸರತ್ತು ಆರಂಭ

-ಆಕಾಂಕ್ಷಿಗಳಲ್ಲಿ ಒಮ್ಮತ ಮೂಡಿಸಲು ತೀವ್ರ ಪ್ರಯತ್ನ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಶಿರಾ ಮತ್ತು ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಆರಂಭಿಸಿದೆ.

ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಜೆಡಿಎಸ್ ವರಿಷ್ಠರು, ಉಭಯ ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾರ್ಯೋನ್ಮುಖರಾಗಿದ್ದಾರೆ.

ಎರಡೂ ಕ್ಷೇತ್ರಗಳ ಪಕ್ಷದ ನಾಯಕರು, ಮುಖಂಡರು ಹಾಗೂ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ನಡೆಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಎಲ್ಲರ ಅಭಿಪ್ರಾಯಗಳನ್ನೂ ಪಡೆದಿದ್ದಾರೆ. ಈಗ ಟಿಕೆಟ್ ಆಕಾಂಕ್ಷಿಗಳನ್ನು ಸಂಪರ್ಕಿಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಸಮಾಲೋಚನೆ ಆರಂಭಿಸಿದ್ದಾರೆ.

2-3 ದಿನಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಖಂಡರಿಂದ ವಾಗ್ಧಾನ:

ಶಿರಾ ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಬಿ.ಸತ್ಯನಾರಾಯಣ ಅವರ ಕುಟುಂಬದವರು ಅಲ್ಲದೆ ಇತರೆ 3-4 ಮಂದಿ ಆಕಾಂಕ್ಷಿಗಳಿರುವುದರಿಂದ ಕುಮಾರಸ್ವಾಮಿ ಅವರು ಖುದ್ದು ಶಿರಾಕ್ಕೆ ಭೇಟಿ ನೀಡಿ ಮುಖಂಡರ ಜತೆ ಚರ್ಚಿಸಿದ್ದಾರೆ. ಜತೆಗೆ ಪ್ರಮುಖ ಮುಖಂಡರೊಂದಿಗೆ ಎರಡು ಮೂರು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ. ಯಾರನ್ನೇ ಅಭ್ಯರ್ಥಿಯಾಗಿ ಮಾಡಿದರೂ ಒಗ್ಗಟ್ಟಿನಿಂದ ಹೋರಾಡುವಂತೆ ಆಕಾಂಕ್ಷಿಗಳಿಂದ ವಾಗ್ಧಾನ ಪಡೆದಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಪೈಪೋಟಿ ನೀಡುವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಉದ್ದೇಶವನ್ನು ಜೆಡಿಎಸ್ ಹೊಂದಿದೆ.

ಆರ್.ಆರ್.ನಗರ ತಲೆನೋವು:

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಹಲವರ ಹೆಸರುಗಳು ಮುನ್ನೆಲೆಗೆ ಬಂದಿವೆ. ಕೆಲವರು ದೇವೇಗೌಡರ ಮೂಲಕ ಮತ್ತೆ ಕೆಲವರು ಕುಮಾರಸ್ವಾಮಿ ಅವರ ಮೂಲಕ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್ ಮುಖಂಡ ಹನುಮಂತರಾಯಪ್ಪ ತಾವು ಇಲ್ಲವೇ ತಮ್ಮ ಮಗಳು ಕುಸುಮಾ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕೆಲವು ಹೊಸ ಮುಖಗಳೂ ಟಿಕೆಟ್ ನಿರೀಕ್ಷೆಯಲ್ಲಿವೆ. ಹಾಗಾಗಿ ಅಭ್ಯರ್ಥಿಗಳ ಆಯ್ಕೆ ಜೆಡಿಎಸ್ ವರಿಷ್ಠರಿಗೆ ತಲೆನೋವುಂಟು ಮಾಡಿದೆ.

---------------------