ನ್ಯೂಸ್

ಜೆಡಿಎಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ

ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಯುವಕರು ಮತ್ತು ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಶಾಸಕ ಸಾ.ರಾ. ಮಹೇಶ್ ಸಮ್ಮುಖದಲ್ಲಿ ಭಾನುವಾರ ಸೇರ್ಪಡೆಯಾದರು.

ಕೆ.ಆರ್.ನಗರ: ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆ ಸಂಚಾರದ ಬಳಿಕ ಕಾಂಗ್ರೆಸ್, ಬಿಜೆಪಿ ಪಕ್ಷ ತೊರೆದು ಹಲವು ನಾಯಕರು ಜೆಡಿಎಸ್ ಸೇರುತ್ತಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ತಿಳಿಸಿದರು.


ಪಟ್ಟಣದ ಆಂಜನೇಯ ಬ್ಲಾಕ್‌ನಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಮುಖ್ಯಮಂತ್ರಿ ಆಗಲಿದ್ದಾರೆ. ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಮಾತ್ರ ರಾಜ್ಯ ಮತ್ತು ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಬಡವರ, ರೈತರು, ಜನಸಾಮಾನ್ಯರ ಪರವಾಗಿ ಇರುವ ಪಕ್ಷ ಜೆಡಿಎಸ್. ರೈತರಿಗಾಗಿ 25 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಮಾಜಿ ಸಿಎಂ ಕುಮಾರಸ್ವಾಮಿ ಮಾತ್ರ ಎಂದರು.


ಪುರಸಭಾ ಸದಸ್ಯ ಉಮೇಶ್ ಮಾತನಾಡಿ, ಶಾಸಕ ಸಾ.ರಾ.ಮಹೇಶ್ ಅವರ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಪಟ್ಟಣದಲ್ಲಿ ತಂಡೋಪ ತಂಡವಾಗಿ ಯವಕರು, ಮುಖಂಡರು ಜೆಡಿಎಸ್ ಸೇರುತ್ತಿದ್ದಾರೆ ಎಂದರು.


ಇದಕ್ಕೂ ಮೊದಲು ಸಾ.ರಾ. ಮಹೇಶ್ ಅವರಿಗೆ ಕ್ರೇನ್ ಮೂಲಕ ಜೋಳದಿಂದ ಕಟ್ಟಿದ್ದ ಭಾರಿ ಗಾತ್ರದ ಹಾರಹಾಕಿ ಕಾರ್ಯಕರ್ತರು ತಮ್ಮ ಅಭಿಮಾನ ಮೆರೆದರು.

ಸುನೀಲ, ಮನು, ಕಂಠೇನಹಳ್ಳಿ ಮನು, ಮಂಜು, ರಾಮಕೃಷ್ಣ, ರಾಕಿ, ದೀಲೀಪ ಸೇರಿದಂತೆ 20ಕ್ಕೂ ಹೆಚ್ಚು ಯುವಕರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದರು. ಪುರಸಭಾ ಸದಸ್ಯ ಸಂತೋಷ್‌ಗೌಡ, ಕೆ.ಪಿ.ಪ್ರಭುಶಂಕರ್, ಮಾಜಿ ಸದಸ್ಯರಾದ ಸುಬ್ರಹ್ಮಣ್ಯ, ಎನ್. ಶಿವಕುಮಾರ್, ಜೆಡಿಎಸ್ ನಗರ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯಮ್ಮ, ಮೋಹನಕುಮಾರಿ, ರೂಪಾ, ಯುವ ಜೆಡಿಎಸ್ ಅಧ್ಯಕ್ಷ ವಿಕಾಸ್, ಪ್ರಧಾನ ಕಾರ್ಯದರ್ಶಿ ಅಮೃತಗೌಡ, ಮುಖಂಡರಾದ ದೀಪು, ಎಚ್.ಜಿ.ಮಂಜು ಇದ್ದರು.