ಮೈಸೂರು: ರಾಜ್ಯದಲ್ಲಿ ಜಾತ್ಯತೀತ ಜನತಾದಳ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಾರದೆ ಇದ್ದರೆ ಪಕ್ಷವನ್ನು ವಿಸರ್ಜಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳುತ್ತಿದ್ದಾರೆ. ನೀವು ಅಲ್ಲಿ ತನಕ ಏತಕ್ಕೆ ಕಾಯುವಿರಿ ಎಂದು ಮತದಾರ ರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸುವ ಮೂಲಕ ಜೆಡಿಎಸ್‌ವನ್ನು ಸೋಲಿಸುವಂತೆ ಪರೋಕ್ಷ ಸಂದೇಶ ನೀಡಿದರು.
ನಗರದ ಜೆಕೆ ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆ ಸಮಾವೇಶದಲ್ಲಿ ಮಾತನಾಡಿ, ರಾಜ್ಯದಲ್ಲಿ ಮತ್ತೆ ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರಕ್ಕೆ ಬರುವುದಿಲ್ಲ. ಜೆಡಿಎಸ್ ಮೇಲೆ ಜನರು ಭರವಸೆ ಕಳೆದುಕೊಂಡಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಜನವಿರೋಧಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಹಮ್ಮಿಕೊ ಂಡಿದೆ. ಯಾತ್ರೆಗೆ ರಾಜ್ಯದ ಎಲ್ಲ ಭಾಗಗಳಲ್ಲೂ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಜನರು ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಸಂಕಲ್ಪ ತೊಟ್ಟಿದ್ದಾರೆ. ಮೈಸೂರು ಜಿಲ್ಲೆಯ 11 ಹಾಗೂ ಚಾಮರಾಜನಗರ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜನರು ನಿರ್ಧಾರ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಆದರೆ, ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ನಿಮ್ಮ ಹೃದಯ ಗೆಲ್ಲಲು ಆಗಲಿಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನಡೆಸಲು ಮತ್ತೊಂದು ಅವಕಾಶ ನೀಡಬೇಕು ಎಂದು ಮತದಾರರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಯನ್ನು ಸಂಪೂರ್ಣ ಈಡೇರಿಸಿದೆ. ಆದರೆ, ಬಿಜೆಪಿ ತಾನು ನೀಡಿದ ಭರವಸೆಗಳ ಪೈಕಿ ಶೇ.50 ಭರವಸೆಗಳನ್ನು ಸಹ ಈಡೇರಿಸಿಲ್ಲ. ಕುರಿತು ನಾವು ಕೇಳುತ್ತಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಬಿಜೆಪಿಯವರಿಗೆ ಸಾಧ್ಯವಾಗುತ್ತಿಲ್ಲ. ಕೇವಲ ಸುಳ್ಳು ಭರವಸೆಗಳನ್ನೇ ನೀಡುತ್ತಾ ಆಡಳಿತ ನಡೆಸುತ್ತಿದ್ದಾರೆ. ಇವರು ನೀಡಿದ ಸುಳ್ಳು ಭರವಸೆಗಳ ಕುರಿತು ಬಿಜೆಪಿ ಪಾಪದ ಪುರಾಣ ಕೃತಿ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ದೇಶದ ಜನಸಾಮಾನ್ಯರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಭರವಸೆ ನೀಡಿದ್ದರು. ಅವರು ನೀಡಿದ ಭರವಸೆ ಈಡೇರಿದೆಯಾ? ನಿಮ್ಮ ಖಾತೆಗೆ ಹಣ ಬಂದಿದೆಯಾ? ಕೊಟ್ಟ ಭರವಸೆಯನ್ನು ಈಡೇರಿಸುವ ಕಡೆ ಗಮನ ಹರಿಸದ ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.