ಎನ್.ಆರ್.ಪುರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲ್ಲೂಕು ಬಿಜೆಪಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿದರು. ಅರುಣಕುಮಾರ್,ವಿ.ನೀಲೇಶ್,ಎಂ.ಎನ್.ನಾಗೇಶ್,ರಶ್ಮಿದಯಾನಂದ್, ಬಿ.ಎಸ್.ಆಶೀಶ್‌ಕುಮಾರ್,ಪ್ರೀತಂ,ಸಜಿ ಇದ್ದರು. 
ನ್ಯೂಸ್

ಜೆಜೆಎಂ ಅವ್ಯವಹಾರ ಲೋಕಾಯುಕ್ತ ತನಿಖೆಯಾಗಲಿ

ಎನ್.ಆರ್.ಪುರ; ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಕುಡಿಯುವ ನೀರಿನ ಯೋಜನೆ ಜಲ ಜೀವನ್ ಮಿಷನ್ ಯೋಜನೆಯಡಿ ಕೋಟ್ಯಂತರ ರೂ. ಅವ್ಯವಹಾರ ನಡೆದಿರುವ ಶಂಕೆ ಇದ್ದು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಸೋಮವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಮುಖಂಡರೊಬ್ಬರು ಜಲ ಜೀವನ್ ಮಿಷನ್ ಯೋಜನೆಯಡಿ 1 ಕೋಟಿ ರೂ.

ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಆದ್ದರಿಂದ ಮಾಹಿತಿ ಹಕ್ಕಿನಲ್ಲಿ ನಮ್ಮ ಕಾರ್ಯಕರ್ತರು ದಾಖಲೆ ಕೇಳಿದ್ದಾರೆ. ಜಲ ಜೀವನ್ ಮಿಷನ್ ಯೋಜನೆಯಡಿ ಯಾವುದೇ ಗ್ರಾಮಗಳಿಗೂ ಸಮರ್ಪಕವಾಗಿ ನೀರು ಬಂದಿಲ್ಲ. ಪೈಪ್‌ಲೈನ್, ಟ್ಯಾಂಕ್, ಪಂಪ್‌ಸೆಟ್‌ಗಳಲ್ಲೂ ಅವ್ಯವಹಾರದ ಶಂಕೆ ಬಂದಿದ್ದು ಸರ್ಕಾರ ತಕ್ಷಣ ತನಿಖೆ ನಡೆಸಬೇಕು. ಮನೆಗಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಈಗಾಗಲೇ ಇಬ್ಬರು ರೈತರನ್ನು ಆನೆ ಸಾಯಿಸಿದೆ. ನೂರಾರು ಎಕರೆ ಅಡಕೆ, ಬಾಳೆ ತೋಟ ಹಾಳು ಮಾಡಿದೆ. 6 ವಷರ್ದ ಹಿಂದೆಯೆ ನಾನು ಕಾಡಾನೆಗಳನ್ನು ಭದ್ರಾ ಹಿನ್ನೀರಿನಿಂದ ಬರಲು ಬಿಡಬಾರದು ಎಂದು ಎಚ್ಚರಿಕೆ ನೀಡಿದ್ದೆ. ಈ ಭಾಗಕ್ಕೆ ಕಾಡಾನೆ ಬಂದು ಮರಿ ಹಾಕಿದರೆ ಮತ್ತೆ ಕಾಡಾನೆ ವಾಪಾಸು ಹೋಗುವುದಿಲ್ಲ. ಈಗ ಕಾಡಾನೆಗಳು ತೋಟಕ್ಕೆ ಬಂದರೆ ಕಲ್ಲು ಸಹ ಹೊಡೆಯುವ ಹಾಗಿಲ್ಲ. ಆನೆ ನಡೆದಿದ್ದೇ ದಾರಿ ಎಂತಾಗಿದೆ. ರೈತರು ತೋಟಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಬೆಳಗಿನ ಜಾವ ರಬ್ಬರ್ ಟ್ಯಾಪಿಂಗ್ ಮಾಡುವವರು ಭಯಪಡುತ್ತಿದ್ದಾರೆ. ಈಗಾಗಲೇ ಎನ್.ಆರ್.ಪುರ ಪಟ್ಟಣದ 1-2 ಕಿ.ಮೀ. ದೂರದಲ್ಲಿ ಕಾಡಾನೆಗಳು ಇದ್ದು ಪಟ್ಟಣಕ್ಕೆ ನುಗ್ಗಿದರೆ ಅಪಾಯ ಹೆಚ್ಚಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಟಿ.ಡಿ.ರಾಜೇಗೌಡರು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿದಿಲ್ಲ. ವಿಧಾನ ಸೌಧದಲ್ಲಿ ಆನೆಗಳ ಬಗ್ಗೆ ಮಾತನಾಡಿಲ್ಲ. ನಾನಾಗಿದ್ದರೆ ಸದನದಲ್ಲಿ ಧರಣಿ ಕೂರುತ್ತಿದ್ದೆ ಎಂದರು.

ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮಾತನಾಡಿ, ಸರ್ಕಾರವು ಜಿಪಂ, ತಾಪಂ ಚುನಾವಣೆ ನಡೆಸದೆ ಇರುವುದರಿಂದ ಅಧಿಕಾರಿಗಳೇ ಆಡಳಿತ ನಡೆಸುತ್ತಿದ್ದಾರೆ ಎಂದರು. ಬಿಜೆಪಿ ಮುಖಂಡರಾದ ವೈ.ಎಸ್.ರವಿ, ರೀನಾ ಬೆನ್ನಿ, ಕೆ.ಪಿ.ಸಂಪತ್ ಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷೆ ರಶ್ಮಿ ದಯಾನಂದ್, ಮುಖಂಡರಾದ ಕೆಸವಿ ಮಂಜುನಾಥ್, ಕೆ.ಎಸ್.ಉಮೇಶ್, ಸುರಭಿ ರಾಜೇಂದ್ರ, ವಾಲ್ಮೀಕಿ ಶ್ರೀನಿವಾಸ್, ಪ್ರೀತಂ, ಸುರೇಶ್, ಸಜಿ, ಎಚ್.ಡಿ.ಲೋಕೇಶ್, ಸೈಯದ್‌ಪರ್ವೀಜ್, ಹೊಸೂರು ಸುರೇಶ್, ಪ್ರದೀಪ್, ಎ.ಬಿ.ಮಂಜುನಾಥ್ ಮತ್ತಿತರರು ಇದ್ದರು. ನಂತರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.