ನ್ಯೂಸ್

ಜೂನ್ 27, ಜುಲೈ 4, ಜುಲೈ 11, ಜುಲೈ 18 ರಂದು ಆಷಾಢ ಶುಕ್ರವಾರ

ಚಾಮುಂಡೇಶ್ವರಿ ಅಮ್ಮನವರ ಜನ್ಮೋತ್ಸವ ಹಾಗೂ ಆಷಾಢ ಶುಕ್ರವಾರಗಳ ಆಚರಣೆಗೆ ಅಗತ್ಯ ಸಿದ್ಧತೆಗಳನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನಡೆಯುವ ಆಷಾಢ ಮಾಸದ 4 ಶುಕ್ರವಾರಗಳು ಮತ್ತು ಅಮ್ಮನವರ ಜನ್ಮೋತ್ಸವ ಆಚರಣೆ ಸಂಬಂಧ ಆಯೋಜಿಸಿದ್ದ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಆಷಾಢ ಶುಕ್ರವಾರ ಹಾಗೂ ವರ್ಧಂತಿಯಂದು ಯಾವುದೇ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ಇರುವುದಿಲ್ಲ. ವಾಹನಗಳನ್ನು ಲಲಿತಾ ಮಹಲ್ ಹೋಟೆಲ್ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು. ಭಕ್ತರಿಗೆ ಸಾರ್ವಜನಿಕ ವಾಹನ ವ್ಯವಸ್ಥೆ ಮಾಡಲಾಗುವುದು. ಜೂನ್ 27, ಜುಲೈ 4, ಜುಲೈ 11, ಜುಲೈ 18 ರಂದು ನಾಲ್ಕು ಆಷಾಢ ಶುಕ್ರವಾರಗಳು ಹಾಗೂ ಜುಲೈ 17 ರಂದು ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಇಲಾಖೆಯಿಂದ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು. ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಬೇಕು. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಶುದ್ಧ ಕುಡಿಯುವ ನೀರಿನ ಪೂರೈಕೆ ಹಾಗೂ ಸ್ವಚ್ಛತೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಸೆಸ್ಕ್ ವತಿಯಿಂದ 1000 ಮೆಟ್ಟಿಲುಗಳ ಬಳಿಯಿರುವ ವಿದ್ಯುತ್ ದೀಪಗಳ ದುರಸ್ತಿ ಹಾಗೂ ಬೆಟ್ಟದ ದೇವಾಲಯಗಳಿಗೆ ದೀಪಾಲಂಕಾರ ಮಾಡಬೇಕು ಎಂದು ತಿಳಿಸಿದರು.

ಆಷಾಢ ಶುಕ್ರವಾರ ಹಾಗೂ ಆಷಾಢ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾಮಾನ್ಯ ದರ್ಶನ ಉಚಿತವಾಗಿದ್ದು, ಪ್ರವೇಶ ದರ್ಶನಕ್ಕೆ 50 ರೂ.ಹಾಗೂ ವಿಶೇಷ ದರ್ಶನಕ್ಕೆ 300ರೂ.ಗಳ ಟಿಕೆಟ್ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಡಿಸಿಪಿ ಮುತ್ತುರಾಜ್, ಚಾಮುಂಡೇಶ್ವರಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರೂಪಾ ಇತರರಿದ್ದರು.