ಬೆಂಗಳೂರು: ರಾಜ್ಯಮಟ್ಟದ ಬೃಹತ್ ಭೋವಿ ಜನೋತ್ಸವವನ್ನು ಜುಲೈ 18 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ಎಸ್. ತಂಗಡಗಿ ತಿಳಿಸಿದರು.
ಚಿತ್ರದುರ್ಗದಲ್ಲಿ ಭೋವಿ ಗುರುಪೀಠವು ಪ್ರತಿ ವರ್ಷದಂತೆ ನಡೆಸುವ ರಾಜ್ಯಮಟ್ಟದ ಬೃಹತ್ ಭೋವಿ ಜನೋತ್ಸವ, ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಹುಟ್ಟು ಹಬ್ಬ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ನೂತನವಾಗಿ ಆಯ್ಕೆಯಾದ ಸಂಸದರು, ನಿಗಮ ಮಂಡಳಿಗಳ ಅಧ್ಯಕ್ಷರಿಗೆ. ಗೌರವ ಸಮರ್ಪಣೆ, ಯುಪಿಎಸ್‌ಪರೀಕ್ಷೆಯಲ್ಲಿ ಪಾಸಾದ ಸಮಾಜದ ಅಭ್ಯರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು ತಿರ್ಮಾನಿಸಲಾಗಿದೆ ಎಂದರು.
ಚಿತ್ರದುರ್ಗ- ಬಾಗಲಕೋಟೆ ಭೋವಿ ಮಹಾ ಸಂಸ್ಥಾನದ ಜಗದ್ಗುರು ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆದ ಸಭೆಯು ಈ ನಿರ್ಧಾರ ತೆಗೆದುಕೊಂಡಿದ್ದು, ಭೋವಿ ಸಮಾಜದ ಭೂತ, ವರ್ತಮಾನ ಹಾಗೂ ಭವಿಷ್ಯದ ದಿಕ್ಸೂಚಿಯ ಮಹಾಸಂಗಮವಾಗಿ ಈ ಕಾರ್ಯಕ್ರಮವನ್ನು ನಡೆಸಲು ಸಭೆ ತೀರ್ಮಾನ ತೆಗೆದುಕೊಂಡಿತು ಎಂದು ತಿಳಿಸಿದರು.
ಭೋವಿ ಸಮಾಜವನ್ನು ಕಟ್ಟುವ ಕೆಲಸ ಬಹು ಕ್ಲಿಷ್ಟಕರವಾಗಿರುವಂತಹದು. ಕಳೆದ ಮೂರು ದಶಮಾನಗಳನ್ನು ಗಮನಿಸಿ, ಅನುಭವವನ್ನು ಹಂಚಿಕೊಳ್ಳುತ್ತಿರುವೆ. ಕಳೆದ ಎರಡು ದಶಮಾನಗಳನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿದ್ದಾಗ ಭೋವಿ ಗುರುಪೀಠದ ಜಗದ್ಗುರುಗಳು ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಜವನ್ನು ಸಂಘಟಿಸಿದ ಪರಿಣಾಮ ನಾನಿಂದು ಮಂತ್ರಿಯಾಗಿರುವೆ. ಭೋವಿ ನಿಗಮ ಸ್ಥಾವನೆಯಾಗಿದೆ. ಶಾಸಕರ ಸಂಖ್ಯೆ ಹೆಚ್ಚಾಗುತ್ತಿದೆ. ನಿಗಮ ಮಂಡಳಿಗಳ ಆಯಾಕಟ್ಟಿನ ಜಾಗದಲ್ಲಿ ಅಧ್ಯಕ್ಷರು ನಿರ್ದೇಶಕರು ನೇಮಕಗೊಳ್ಳುತ್ತಿದ್ದಾರೆ. ನಮ್ಮ ಮುಖ್ಯಮಂತ್ರಿಗಳ ಆಪ್ತವಲಯದ ಶ್ರೀಗಳಾಗಿ ಗುರುತಿಸಿಕೊಂಡಿದ್ದಾರೆ. ಪರಿಣಾಮ ಕೆಪಿಎಸ್ಸಿ ಸದಸ್ಯರ ನೇಮಕವಾಗುತ್ತಿದೆ. ಇಮ್ನಡಿ ಶ್ರೀಗಳ ಸಮಾಜ ಬದ್ಧತೆಯಿಂದಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಬಲಗೊಳ್ಳುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿ,ಸಮಾಜದ ಏಳಿಗೆಗೆ ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ. ಸಮಾಜದ ಸಂಘಟನೆ ಇಂದು ತುರ್ತಾಗಿದೆ. ಕಾರಣ ಇತ್ತೀಚೆಗಷ್ಟೇ ನಡೆದ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಎಲ್ಲಾ ಪಕ್ಷಗಳು ನಮ್ಮ ಸಮಾಜವನ್ನು ತುಂಬಾ ಕಡೆಗಣಿಸಿವೆ. ಹಾಗಾಗಿ ಸಮಾಜದ ಸಂಘಟನೆ ತುಂಬಾ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಭೋವಿ ಜನೋತ್ಸವ ದೊಡ್ಡ ಮಟ್ಟದಲ್ಲಿ ನಡೆಯಬೇಕಿದೆ. ಸಾಧ್ಯವಾದರೆ ಮುಂದೆ ಬೆಂಗಳೂರು ಅರಮನೆ ಅವರಣದಲ್ಲಿ ಕಾರ್ಯಕ್ರಮ್ನಡೆಸಲು ಚಿಂತನೆ ನಡೆಯಬೇಕಿದೆ ಎಂದರು.