ನ್ಯೂಸ್

ಜೀವ ವೈವಿಧ್ಯ ರಕ್ಷಣೆ ಮಂಡಳಿ‌ ಉದ್ದೇಶ

ಗದಗ: ಭೂಮಿಯಲ್ಲಿನ ಸಣ್ಣ ಸೂಕ್ಷ್ಮಾಣು ಜೀವಿಗಳಿಂದ ಹಿಡಿದು ದೊಡ್ಡ ಜೀವಿಗಳು, ಅಳವಿನಂಚಿನಲ್ಲಿರುವ ಸಸ್ಯರಾಶಿ, ಜೀವಿಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವದು ರಾಜ್ಯ ಜೀವವೈವಿಧ್ಯ ಮಂಡಳಿಯ ಮುಖ್ಯ ಉದ್ದೇಶವಾಗಿದೆ ಎಂದು ಜೀವ ವೈವಿದ್ಯಮಯ ಮಂಡಳಿ ಅಧ್ಯಕ್ಷ ಎನ್.ಎಂ.ರವಿ ಕಾಳಪ್ಪ ಹೇಳಿದರು.

ನಗರದ ಡಿ.ಜಿ.ಎಂ. ಆಯುರ್ವೇದಿಕ್ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಜೀವ ವೈವಿದ್ಯಮಯ ಮಂಡಳಿಯು 2002ರಲ್ಲಿ ದೇಶದಲ್ಲಿ ಕಾನೂನಿನಡಿ ಅಳವಡಿಸಿ 2003 ರಿಂದ ಕಾರ್ಯ ರೂಪಕ್ಕೆ ತರಲಾಯಿತು ಎಂದರು.

ಭೂಮಿ ಮೇಲಿನ ಅಳವಿನಂಚಿನಲ್ಲಿರುವ ಜೀವರಾಶಿಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೂ ಸಮಿತಿಗಳನ್ನು ರಚಿಸಲಾಗಿದ್ದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ಕುರಿತು ಜಾಗ್ರತಿ ಮೂಡಿಸುವ ಕಾರ್ಯವಾಗಬೇಕಾಗಿದೆ ಎಂದರು.

ಗದಗ ಜಿಲ್ಲೆಯ ಮಣ್ಣು, ಗಾಳಿಯಲ್ಲಿಯೂ ಕೂಡ ಔಷಧಿಯ ಗುಣಗಳನ್ನು ಹೊಂದಿದೆ. ಇಲ್ಲಿನ ಕಪ್ಪತಗುಡ್ಡದಲ್ಲಿ ಸುಮಾರು 600 ಕ್ಕೂ ಹೆಚ್ಚಿನ ಔಷಧಿ ಗಿಡಮರಗಳಿದ್ದು ಈ ಕುರಿತು ಹೆಚ್ಚಿನ ಅಧ್ಯಯನ ನಡೆಸಿ ಅವುಗಳ ಸಂರಕ್ಷಣೆಯ ಜತೆಗೆ ಇವುಗಳಿಂದಾಗುವ ಪ್ರಯೋಜನೆ, ಬಳಕೆ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ನೀಡುವ ಕಾರ್ಯ ಕೈಗೊಳ್ಳಲಾಗುವುದು ಎಂದರು.ಗ್ರಾಮ ಪಂಚಾಯಿತಿಗಳಲ್ಲಿ ರಚಿತವಾದ ಜೀವ ವೈವಿದ್ಯ ನಿರ್ವಹಣಾ ಸಮಿತಿಗಳು ಸ್ಥಳೀಯ ಜನರೊಡನೆ ಸಮಾಲೋಚಿಸಿ ಜನತಾ ಜೀವವೈವಿಧ್ಯ ದಾಖಲಾತಿಯನ್ನು ಸಿದ್ದಪಡಿಸಲಾಗುವುದು ಎಂದರು.

ಜೀವ ವೈವಿಧ್ಯ ನಿರ್ವಹಣಾ ಸಮಿತಿ ಅಧ್ಯಕ್ಷರೂ ಸೇರಿ ಸ್ಥಳೀಯ ಸಂಸ್ಥೆಯಿಂದ ನಾಮನಿರ್ದೇಶಿತರಾದ ಆರು ಜನ ಸದಸ್ಯರನ್ನು ಹೊಂದಿರುತ್ತದೆ. ಈ ಸಮಿತಿಯಲ್ಲಿ ಕನಿಷ್ಠ ಪಕ್ಷ ಒಬ್ಬರು ಮಹಿಳಾ ಸದಸ್ಯರು ಸದಸ್ಯರಿರಬೇಕಾಗಿರುತ್ತದೆ. ರಾಜ್ಯದಲ್ಲಿ ಜಿ.ಪಂ., ತಾ.ಪಂ. ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಒಟ್ಟು 6555 ಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು ತಮ್ಮ ವ್ಯಾಪ್ತಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವ ಮೂಲಕ ಜೀವ ವೈವಿಧ್ಯವನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಬೇಕು. ಈ ಕುರಿತು ಪ್ರತಿ ಜಿಲ್ಲೆಯಲ್ಲಿಯೂ ಕಾರ್ಯಾಗಾರವನ್ನು ಆಯೋಜಿಸುವ ಮೂಲಕ ಜೀವ ವೈವಿಧ್ಯ ಮಂಡಳಿಯ ಕಾರ್ಯಗಳು ಹಾಗೂ ಸಮಿತಿಗೆ ಇರುವ ಹಕ್ಕು ಜವಾಬ್ದಾರಿಗಳ ಕುರಿತು ಜಾಗ್ರತಿ ಮೂಡಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿಯ ತಾಂತ್ರಿಕ ಕಾರ್ಯನಿರ್ವಾಹಕ ಪ್ರಸನ್ನ, ಡಿ.ಜಿ.ಎಂ. ಕಾಲೇಜಿನ ಪ್ರಾಚಾರ್ಯ ಡಾ.ಉಮೇಶ ಪುರದ, ಕಾರ್ಯದರ್ಶಿ ಡಾ.ಜಿ.ಬಿ.ಪಾಟೀಲ ಇದ್ದರು.