ನ್ಯೂಸ್

ಜೀವ-ಜೀವನ ಅಮೂಲ್ಯ; ಆತ್ಮಹತ್ಯೆ ಯಾವ ಸಮಸ್ಯೆಗೂ ಪರಿಹಾರವಲ್ಲ..

ಕರೊನಾದ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿರಬಹುದು. ಆದರೆ, ಅದು ಸೃಷ್ಟಿಸಿದ ಆಘಾತ, ಸ್ಥಿತ್ಯಂತರಗೊಂಡ ಪರಿಸ್ಥಿತಿಗಳು, ದಯನೀಯ ಸ್ಥಿತಿಗೆ ಬಂದ ಜೀವನ ಈ ಎಲ್ಲ ಸಂಗತಿಗಳಿಂದ ಜನರು ಮಾನಸಿಕವಾಗಿ ತೀವ್ರ ಒತ್ತಡ ಎದುರಿಸುತ್ತಿದ್ದಾರೆ. ದೀರ್ಘಾವಧಿ ಲಾಕ್​ಡೌನ್ ಪರಿಣಾಮ ಉದ್ಯೋಗನಷ್ಟ, ವೇತನ ಕಡಿತದ ಕ್ರಮಗಳು ಮಧ್ಯಮವರ್ಗದವರನ್ನು ಸಂಕಷ್ಟಕ್ಕೆ ಸಿಲುಕಿಸಿವೆ. ಬಡವರ ಸ್ಥಿತಿ ಇನ್ನೂ ಶೋಚನೀಯ. ಹಲವು ರಂಗಗಳ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆಯಾದರೂ, ಜೀವನದ ಪಲ್ಲಟಗಳು ಸೃಷ್ಟಿಸಿದ ಪರಿಣಾಮ ಮಾತ್ರ ಘೋರ. ಇದರಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಕಳವಳದ ಸಂಗತಿ. ಕರೊನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಪ್ರತಿ ದಿನ ಸರಾಸರಿ 34 ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ಮಾತ್ರವಲ್ಲ, ಕರೊನಾ ಉಪಟಳದಿಂದ 2020ರಲ್ಲಿ ದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಶೇಕಡ 10ರಷ್ಟು ಹೆಚ್ಚಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೋ (ಎನ್​ಸಿಆರ್​ಬಿ) ಕೆಲ ದಿನಗಳ ಹಿಂದಷ್ಟೇ ತನ್ನ ವರದಿಯಲ್ಲಿ ತಿಳಿಸಿದೆ. 2020ರ ಜನವರಿ-ಡಿಸೆಂಬರ್ ಅವಧಿಯಲ್ಲಿ ದೇಶದಾದ್ಯಂತ ಆತ್ಮಹತ್ಯೆಗಳಿಂದ 1,53,052 ಜನರು ಮೃತಪಟ್ಟಿದ್ದಾರೆ (2019ರಲ್ಲಿ 1.39 ಲಕ್ಷ). ಪ್ರಾಣ ಕಳೆದುಕೊಂಡವರಲ್ಲಿ ವಿದ್ಯಾರ್ಥಿಗಳು ಮತ್ತು ಸಣ್ಣಪುಟ್ಟ ವ್ಯಾಪಾರಸ್ಥರು, ಉದ್ಯಮಿಗಳ ಸಂಖ್ಯೆಯೇ ಅಧಿಕ.

ಧುತ್ತೆಂದು ಕಾಣಿಸಿಕೊಂಡ ಕರೊನಾ ಮಹಾಮಾರಿ ದೊಡ್ಡ ಮಾನವೀಯ ಸಂಕಷ್ಟವನ್ನು ಸೃಷ್ಟಿಸಿದೆ ಎಂಬುದು ನಿಜವೇ. ಆದರೆ, ಜೀವ ಮತ್ತು ಜೀವನ ಎರಡೂ ಬಹು ಅಮೂಲ್ಯವಾದವು. ಸಮಸ್ಯೆಗಳಿಗೆ ಬೆದರಿ ಆತ್ಮಹತ್ಯೆ ಮಾಡಿಕೊಂಡರೆ ಯಾವುದೇ ಸಮಸ್ಯೆ ಬಗೆಹರಿಯುವುದಿಲ್ಲ. ಬದಲಾಗಿ, ಅಂಥ ವ್ಯಕ್ತಿಯ ಕುಟುಂಬದ ಮೇಲೆ ಮತ್ತಷ್ಟು ಹೊರೆ ಬಿದ್ದು, ಒತ್ತಡ, ಸಂಕಷ್ಟ ಎದುರಿಸುವಂತಾಗುತ್ತದೆ. ಈ ಕ್ಷಣಕ್ಕೆ, ದಿನಕ್ಕೆ ಸಮಸ್ಯೆಯ ತೀವ್ರತೆ ಹೆಚ್ಚಿರಬಹುದು. ಆದರೆ, ಕಾಲವೇ ಎಲ್ಲ ನೋವುಗಳಿಗೆ ಉತ್ತಮ ಔಷಧ ಎಂಬುದನ್ನು ಗಮನಿಸಬೇಕು. ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡರೆ ಇಡೀ ಹೋರಾಟವೇ ವ್ಯರ್ಥವಲ್ಲವೇ? ಪರಿಸ್ಥಿತಿಗಳು ಸುಧಾರಿಸಲು ಒಂದಿಷ್ಟು ಸಮಯ ಬೇಕು.

ಆ ಅವಧಿಯಲ್ಲಿ ತಾಳ್ಮೆ, ಸಂಯಮವೇ ಜೀವನದ ಮಂತ್ರವಾದರೆ ಕಷ್ಟಗಳ ಬೇಲಿ ದಾಟಿ ಒಳ್ಳೆಯ ದಿನಗಳತ್ತ ಸಾಗಬಹುದು. ಈ ಹಿಂದೆಯೂ ನಮ್ಮ ದೇಶ ಮತ್ತು ಜಾಗತಿಕ ರಂಗ ಹಲವಾರು ಮಹಾಮಾರಿಗಳನ್ನು ಕಂಡಿದೆ, ಅದರಿಂದ ಗೆದ್ದು ಬಂದಿದೆ ಕೂಡ. ಕರೊನಾ ವಿಷಯದಲ್ಲಂತೂ ಬೇಗನೆ ಲಸಿಕೆ ಕಂಡುಹಿಡಿದು, ವಿತರಣೆಯ ಅಭಿಯಾನ ತೀವ್ರಗೊಳಿಸಿದ್ದರಿಂದ ಜೀವಹಾನಿಯ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಾಗಿದೆ. ಆರ್ಥಿಕನಷ್ಟ, ಉದ್ಯೋಗನಷ್ಟದಂಥ ಸಮಸ್ಯೆಗಳಿಂದ ಆಚೆ ಬರಲು ಪರಿಹಾರದ ದಾರಿಗಳು ಇದ್ದೇ ಇವೆ. ಅಂಥ ಮಾರ್ಗಗಳನ್ನು ವಿವೇಚನೆಯಿಂದ ಅವಲೋಕಿಸಿ, ಮುಂದಡಿ ಇಡಬೇಕೆ ಹೊರತು ಆತ್ಮಹತ್ಯೆಯಂಥ ದುಡುಕಿನ ನಿರ್ಧಾರಕ್ಕೆ ಮುಂದಾಗಬಾರದು. ಯುವಕರ ಮುಂದೆಯಂತೂ ಜೀವನದ ಹಲವು ಅವಕಾಶಗಳಿರುತ್ತವೆ; ಅದನ್ನು ಪರಿಗಣಿಸುವುದನ್ನು ಬಿಟ್ಟು ಸಾವಿನ ಮನೆಯ ಹಾದಿ ಹಿಡಿಯುವುದು ಸರಿಯಲ್ಲ. ಅದಮ್ಯ ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ, ಆಶಾವಾದ, ಕಠಿಣ ಪರಿಶ್ರಮ ವ್ಯಕ್ತಿತ್ವದ ಭಾಗವಾಗಲಿ.