ಹುಣಸೂರು: ಎರಡು ವರ್ಷಗಳ ಹಿಂದೆ ಜೀತಗಾರಿಕೆಯಿಂದ ವಿಮುಕ್ತಿ ಪಡೆದರೂ ತಾಲೂಕು ಆಡಳಿತದ ನಿರ್ಲಕ್ಷೃದಿಂದ ಬದುಕು ಕಟ್ಟಿಕೊಳ್ಳಲಾಗಿದೆ ವೃದ್ಧರೊಬ್ಬರು ಅತಂತ್ರರಾಗಿದ್ದಾರೆ.
ಹುಣಸೂರು ನಗರದ ಗೋಕುಲ ರಸ್ತೆಯ ಬಳಿ ಚಪ್ಪಲಿ ಹೊಲಿದು ಜೀವನದ ಬಂಡಿ ಸಾಗಿಸುತ್ತಿರುವ 70ರ ಹರೆಯದ ರಂಗ ಎಂಬುವವರು ಜೀತದಿಂದ ಮುಕ್ತರಾದರೂ ಬದುಕಿನ ಬವಣೆಯಿಂದ ಮುಕ್ತರಾಗದೆ ಸಂಕಷ್ಟದಲ್ಲಿದ್ದಾರೆ.
ನಗರದ ಪೌರಕಾರ್ಮಿಕರ ಕಾಲನಿಯಲ್ಲಿ ಈ ಹಿಂದೆ ವಾಸವಿದ್ದ ರಂಗ ಅವರು ಸುಮಾರು 30 ವರ್ಷಗಳ ಕಾಲ ನಗರದ ನಿವಾಸಿಯೊಬ್ಬರ ಮನೆಯಲ್ಲಿ ಜೀತ ಮಾಡುತ್ತಿದ್ದರು. ಇವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಜೀತಗಾರಿಕೆಗೆ ವರ್ಷಕ್ಕೊಮ್ಮೆ ನೀಡುತ್ತಿದ್ದ ಪುಡಿಗಾಸಿನಿಂದಲೇ ರಂಗ ದಂಪತಿ ಕಷ್ಟಪಟ್ಟು ಮಕ್ಕಳ ಮದುವೆ ಮಾಡಿದ್ದಾರೆ. ಇವರು ಮಾಡುತ್ತಿದ್ದ ಜೀತಗಾರಿಕೆ ಬಗ್ಗೆ ಎರಡು ವರ್ಷಗಳ ಹಿಂದೆ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ತಿಳಿದು ತಾಲೂಕು ಆಡಳಿತದ ಗಮನಕ್ಕೆ ತಂದ ಪರಿಣಾಮ ರಂಗ ಅವರು ಜೀತವಿಮುಕ್ತರಾದರು.
ಬೆಂಕಿಯಿಂದ ಬಾಣಲೆಗೆ: ಮೂರು ದಶಕಗಳ ಕಾಲ ಜೀತದಾಳಾಗಿ ದುಡಿದ ರಂಗ ಅಂತೂ ಇಂತೂ ಸ್ವಾವಲಂಬಿಯಾಗಿ ಬದುಕಲು ತನಗೂ ಬಿಡುಗಡೆಯ ಭಾಗ್ಯ ಸಿಕ್ಕಿತೆಂದು ಸಂತಸಪಟ್ಟರು. ಸರ್ಕಾರದಿಂದ ಜೀತವಿಮುಕ್ತರಿಗೆ ಹಲವಾರು ಕಾರ್ಯಕ್ರಮಗಳಿದ್ದು, ಅವುಗಳ ಮೂಲಕ ತಾನೂ ಮುಖ್ಯವಾಹಿನಿಗೆ ಬರಯಬಹುದೆಂದು ಕನಸು ಕಂಡರು. ಆದರೆ ಆದದ್ದೇ ಬೇರೆ. ಜೀತವಿಮುಕ್ತರಾಗಿ ಎರಡು ವರ್ಷಗಳೇ ಕಳೆದರೂ ರಂಗ ಅವರನ್ನು ತಾಲೂಕು ಆಡಳಿತ ಕ್ಯಾರೆ ಅನ್ನಲಿಲ್ಲ. ಇವರೊಟ್ಟಿಗೆ ಇನ್ನೂ 22 ಮಂದಿ ಜೀತವಿಮುಕ್ತರಾಗಿದ್ದು, ಅವರೆಲ್ಲರಿಗೂ ಅಷ್ಟೋ ಇಷ್ಟೋ ಅನುಕೂಲ ಮಾಡಿಕೊಟ್ಟಿರುವ ತಾಲೂಕು ಆಡಳಿತ ರಂಗ ಅವರ ಬಗ್ಗೆ ಮಾತ್ರ ನಿರಾಸಕ್ತಿ ಹೊಂದಿರುವುದು ಏಕೆ ಎನ್ನುವುದು ತಿಳಿಯದಾಗಿದೆ.
ಹೊಟ್ಟೆಗಾಗಿ ಚಪ್ಪಲಿ ಹೊಲಿದರು: ಜೀತದಿಂದ ಹೊರಬಂದ ನಂತರ ಪತ್ನಿಯೊಂದಿಗೆ ತಾಲೂಕಿನ ಹೊಸಕೋಟೆ ಗ್ರಾಮಕ್ಕೆ ಸ್ಥಳಾಂತರಗೊಂಡ ರಂಗ ಅವರು ಅಲ್ಲಿ ಸರ್ಕಾರಿ ಭೂಮಿಯಲ್ಲಿ ಗುಡಿಸಲು ಕಟ್ಟಿಕೊಂಡು ಬದುಕುತ್ತಿದ್ದಾರೆ. ನಗರದಲ್ಲಿ ಚಪ್ಪಲಿ ಹೊಲಿದು ಹೊಟ್ಟಿ ಹೊರೆದುಕೊಳ್ಳುತ್ತಿದ್ದಾರೆ. ಬಿಸಿಲು, ಮಳೆ, ಚಳಿಯೆನ್ನದೆ ವೃದ್ಧಾಪ್ಯದಲ್ಲೂ ದುಡಿದು ತಿನ್ನುವ ಪರಿಸ್ಥಿತಿ ಬಂದೊದಗಿದೆ.
ಸರ್ಕಾರದ ಸೌಲಭ್ಯಗಳೇನೇನು?: ತಾಲೂಕಿನಲ್ಲಿ ಕಳೆದ 20 ವರ್ಷಗಳಿಂದ ಜೀತದ ಸಂಕೋಲೆಯಲ್ಲಿ ಬದುಕುತ್ತಿದ್ದ 110ಕ್ಕೂ ಹೆಚ್ಚು ಮಂದಿಯನ್ನು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಗುರುತಿಸಿ ಜೀತವಿಮುಕ್ತಿಗೊಳಿಸುವ ಕೆಲಸ ಮಾಡಿದ್ದಾರೆ. ಮಾತ್ರವಲ್ಲದೆ, ಜೀತವಿಮುಕ್ತಿ ಹೊಂದಿರುವವರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡಲೂ ತಾಲೂಕು ಆಡಳಿತದೊಂದಿಗೆ ಹೋರಾಟ ನಡೆಸಿದ್ದಾರೆ. ವ್ಯಕ್ತಿ ಜೀತದಿಂದ ವಿಮುಕ್ತಿ ಹೊಂದಿದ ಕೂಡಲೇ ಸರ್ಕಾರ ಒಂದು ಲಕ್ಷ ರೂ. ಪರಿಹಾರ ನೀಡಬೇಕು. ವಸತಿ ಸೌಲಭ್ಯ, ಸ್ವಾವಲಂಬಿ ಬದುಕಿಗಾಗಿ ಸಾಲಸೌಲಭ್ಯ, ಆಧಾರ್‌ಕಾರ್ಡ್, ರೇಷನ್, ಆರೋಗ್ಯ ಕಾರ್ಡ್‌ಗಳನ್ನು ಮಾಡಿಸಿಕೊಡಬೇಕು. ಅಲ್ಲದೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ, ಅಂಬೇಡ್ಕರ್ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮಗಳನ್ನೊಳಗೊಂಡು ಜೀತವಿಮುಕ್ತ ವ್ಯಕ್ತಿಯ ಕುಲಕಸುಬನ್ನು ಗುರುತಿಸಿ ಅದನ್ನು ಮುಂದುವರಿಸಲು ಕ್ರಮ ವಹಿಸಬೇಕು. ಚಪ್ಪಲಿ ಹೊಲಿಯುವವರಿಗೆ ಚರ್ಮ ಕುಟೀರ ನಿರ್ಮಿಸಿಕೊಡುವ ಕಾರ್ಯ ಆದ್ಯತೆ ಮೇಲೆ ಆಗಬೇಕು. ಜೀತವಿಮುಕ್ತ ವ್ಯಕ್ತಿಯ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಕಲ್ಪಿಸುವ ಕಾರ್ಯವೂ ತಾಲೂಕು ಆಡಳಿತದ ಹೊಣೆಯಾಗಿರುತ್ತದೆ.
ಆದರೆ ರಂಗ ಅವರ ವಿಷಯದಲ್ಲಿ ಇದ್ಯಾವುದೂ ನಡೆದಿಲ್ಲ. ಜೀತವಿಮುಕ್ತರಾದ ಆರಂಭದಲ್ಲಿ 50 ಸಾವಿರ ರೂ. ಸಾಲಸೌಲಭ್ಯ ದೊರಕಿದೆ. ಆದರೂ ನಗರಸಭೆಯಿಂದ ಚರ್ಮ ಕುಟೀರ ನಿರ್ಮಿಸಿಕೊಡುವ ಕಾರ್ಯ ನಡೆದಿಲ್ಲ. ಮಾತ್ರವಲ್ಲದೆ, ವ್ಯಕ್ತಿಯು ಜಮೀನು ಹೊಂದಿರದಿದ್ದರೆ ಆತನಿಗೆ ಭೂ ಒಡೆತನ ಕಾಯ್ದೆಯಡಿ ಜಮೀನು ಒದಗಿಸಿ, ಕೃಷಿ ಕಾರ್ಯಕ್ಕೆ ಅಗತ್ಯ ಬೋರ್‌ವೆಲ್ ಕೊರೆಸುವ, ಜಮೀನಿಗೆ ತಂತಿ ಬೇಲಿ ಅಳವಡಿಸುವ ಕಾರ್ಯವನ್ನು ತಾಲೂಕು ಆಡಳಿತ ಮಾಡಿಕೊಡಬೇಕು. ಇದ್ಯಾವುದನ್ನು ತಾಲೂಕು ಆಡಳಿತ ಕೈಗೊಂಡಿಲ್ಲ ಎಂದು ನಿಂಗರಾಜ ಮಲ್ಲಾಡಿ ಆರೋಪಿಸಿದ್ದಾರೆ.