ಕಾರವಾರ: ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಕೋವಿಡ್ ಪ್ರಕರಣಗಳು ಶತಕ ಬಾರಿಸಿವೆ. ಶನಿವಾರದ ವರದಿಯಂತೆ ಜಿಲ್ಲೆಯ 139 ಜನರಲ್ಲಿ ಸೋಂಕು ಪತ್ತೆಯಾಗಿದೆ. ಒಂದು ಸಾವು ಸಂಭವಿಸಿದೆ. ಕಾರವಾರದ 34, ಅಂಕೋಲಾ- 12, ಕುಮಟಾ- 16, ಹೊನ್ನಾವರ-9, ಭಟ್ಕಳ-1, ಶಿರಸಿ- 31, ಸಿದ್ದಾಪುರ-10, ಯಲ್ಲಾಪುರ-3, ಮುಂಡಗೋಡ-2, ಹಳಿಯಾಳದ 21 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 472 ಕ್ಕೆ ಏರಿಕೆಯಾಗಿದೆ. ಕಾರವಾರದಲ್ಲಿ ಒಂದು ಸಾವು ಸಂಭವಿಸಿದೆ. ಜಿಲ್ಲೆಯ ಇದುವರೆಗಿನ ಕೋವಿಡ್ ಸೋಂಕಿತರ ಸಂಖ್ಯೆ 16095 ಕ್ಕೆ ಏರಿಕೆಯಾಗಿದೆ.
ವಿದೇಶಿ ಪ್ರವಾಸಿಗರಿಗೆ ಲಸಿಕೆ ಭಾಗ್ಯ
ಗೋಕರ್ಣ: ಬೆಂಗಳೂರಿನ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಭಾರತದಲ್ಲಿ ನೆಲೆಸಿರುವ ವಿದೇಶಿಯರಿಗೆ ಕೋವಿಡ್-19 ಲಸಿಕೆ ನೀಡಲು ಒಪ್ಪಿಗೆ ಸೂಚಿಸಿ ಜಿಲ್ಲಾ ಆರೋಗ್ಯ ಇಲಾಖೆಗೆ ಶುಕ್ರವಾರ ಲಿಖಿತ ಪತ್ರ ರವಾನಿಸಿದೆ.
ಅಭಿಯಾನದ ನಿರ್ದೇಶಕರು ಈ ಬಗ್ಗೆ ಅಧಿಕೃತ ಆದೇಶ ನೀಡಿದ್ದಾರೆ. ಇದರಿಂದಾಗಿ ಗೋಕರ್ಣ ಮತ್ತು ಸುತ್ತಲಿನ ವಿವಿಧೆಡೆಗಳಲ್ಲಿ ತಮ್ಮ ದೇಶಕ್ಕೆ ಮರಳಲಾಗದೆ ವಾಸಿಸುತ್ತಿರುವ ನೂರಾರು ವಿದೇಶಿಯರು ಲಸಿಕೆ ಪಡೆಯುವ ಅವಕಾಶ ಪಡೆದಿದ್ದಾರೆ. ಕಳೆದ ಮಾರ್ಚ್ನಿಂದ ಅನೇಕ ವಿದೇಶಿಯರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಮಗೂ ವ್ಯಾಕ್ಸಿನ್ ಒದಗಿಸಲು ಒತ್ತಾಯಿಸುತ್ತ ಬಂದಿದ್ದರು. ಆದರೆ, ಸರ್ಕಾರದ ಅಧಿಕೃತ ಆದೇಶ ಇಲ್ಲದ್ದರಿಂದ ಅವರನ್ನು ವಾಪಸ್ ಕಳುಹಿಸಲಾಗುತ್ತಿತ್ತು. ಶುಕ್ರವಾರ ತಾಲೂಕಿನಲ್ಲಿ ಲಸಿಕೆ ಖಾಲಿಯಾಗಿದ್ದು, ಸೋಮವಾರ ಹೊಸ ಲಸಿಕೆ ಬರಲಿದೆ. ಆ ನಂತರದಲ್ಲಿ ವಿದೇಶಿಯರಿಗೆ ಲಸಿಕೆ ಒದಗಿಸುವ ಕ್ರಮ ಪ್ರಾರಂಭವಾಗುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.
ಈ ಭಾಗದಲ್ಲಿ ಸದ್ಯ 200ಕ್ಕೂ ಹೆಚ್ಚಿನ ವಿದೇಶಿ ಪ್ರವಾಸಿಗರು ಇಲ್ಲಿ ತಂಗಿದ್ದಾರೆ ಎಂದು ಅಂದಾಜಿಸಲಾಗಿದೆ. ವಿದೇಶಿಯರ ಪಾಸ್ಪೋರ್ಟ್ ಅನ್ನು ಗುರುತಿನ ಚೀಟಿಯಾಗಿ ಬಳಸುವಂತೆ ಆದೇಶಿಸಲಾಗಿದೆ.
ಕೋವಿಡ್ ಮಾರ್ಗಸೂಚಿಯಂತೆ ವ್ಯವಹರಿಸಿ
ಸಿದ್ದಾಪುರ: ಬ್ಯಾಂಕ್ಗಳಲ್ಲಿ ಗ್ರಾಹಕರಿಗೆ ತೊಂದರೆ ಆಗದಂತೆ ಸರ್ಕಾರದ ಕರೊನಾ ಮಾರ್ಗಸೂಚಿಯಂತೆ ವ್ಯವಹರಿಸಬೇಕು ಎಂದು ಪಟ್ಟಣದ ಎಲ್ಲ ಬ್ಯಾಂಕ್ಗಳ ವ್ಯವಸ್ಥಾಪಕರಿಗೆ ತಹಸೀಲ್ದಾರ್ ಪ್ರಸಾದ ಎಸ್.ಎ. ಸೂಚನೆ ನೀಡಿದರು.
ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಪಟ್ಟಣದ ಎಲ್ಲ ಬ್ಯಾಂಕ್ ವ್ಯವಸ್ಥಾಪಕರ ಸಭೆ ಹಾಗೂ ಕರೊನಾ ಜಾಗೃತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರೊನಾ ಎರಡನೇ ಅಲೆ ವೇಗವಾಗಿ ಹರಡುತ್ತಿದ್ದು, ಎಲ್ಲರೂ ಜಾಗೃತರಾಗಬೇಕಾಗಿದೆ. ಆರ್ಥಿಕ ವ್ಯವಹಾರ ನಡೆಯುವ ಬ್ಯಾಂಕ್ನಲ್ಲಿ ಪರಸ್ಪರ ಅಂತರ ಕಾಯ್ದುಕೊಳ್ಳುವುದರ ಜತೆಗೆ ಮಾಸ್ಕ್ ಧರಿಸಿ ಬರುವಂತೆ ಗ್ರಾಹಕರಿಗೆ ಮನವರಿಕೆ ಮಾಡಿಕೊಡಬೇಕು. ಒಮ್ಮೆ ಮಾಸ್ಕ್ ಧರಿಸಿ ಬರದಿದ್ದರೆ ಅವರಿಗೆ ಬ್ಯಾಂಕ್ನವರೇ ಮಾಸ್ಕ್ ನೀಡಬೇಕು. ಸ್ಯಾನಿಟೈಸರ್ ಇಡಬೇಕು. ಇದರಿಂದ ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೂ ಅನುಕೂಲವಾಗಲಿದೆ. ಅಲ್ಲದೆ, ಹೆಚ್ಚು ಗ್ರಾಹಕರು ಬರುವ ಬ್ಯಾಂಕ್ಗಳಲ್ಲಿ ಕೌಂಟರ್ಗಳನ್ನು ಹೆಚ್ಚಿಸಬೇಕು. ಬ್ಯಾಂಕ್ ಒಳಗಡೆ ಹತ್ತು ಜನರಿಗಿಂತ ಹೆಚ್ಚು ಅವಕಾಶ ನೀಡಬಾರದು ಎಂದು ಸೂಚಿಸಿದರು.
ಮುಖ್ಯವಾಗಿ ಕೆಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಈಗ ಬೆಳೆ ಸಾಲ ತುಂಬುವುದು ಹಾಗೂ ಪಡೆಯುವ ಸಮಯ ಆದ್ದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಆದ್ದರಿಂದ ಮೇಲಧಿಕಾರಿಗಳ ಅನುಮತಿ ಪಡೆದು ಹೆಚ್ಚುವರಿ ಕೌಂಟರ್ ಆರಂಭಿಸಬೇಕು ಎಂದು ಕೆಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಿಗೆ ತಿಳಿಸಿದರು.
ಈಗಾಗಲೇ ಪಟ್ಟಣದ ಎಲ್ಲ ಅಂಗಡಿಯವರಿಗೆ ಕೋವಿಡ್ ನಿಯಮ ಪಾಲಿಸಿ ವ್ಯವಹರಿಸುವಂತೆ ಸೂಚಿಸಲಾಗಿದೆ. ನಿಯಮ ಪಾಲಿಸದಿದ್ದರೆ ಕ್ರಮ ಕೈಗೊಳ್ಳುವುದು ಅನಿವಾರ್ಯ. ಆನರು ಸಹ ಮಾಸ್ಕ್ ಧರಿಸಿ ಬರಬೇಕು. ಸಂಜೆ ವ್ಯವಹಾರ ನಡೆಸುವ ಫಾಸ್ಟ್ ಪುಡ್ ಅಂಗಡಿಯವರು ಸ್ವಚ್ಛತೆ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವುದಕ್ಕೆ ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುಮಾರ ನಾಯ್ಕ ಅವರಿಗೆ ತಿಳಿಸಿದರು.
ಕೆಡಿಸಿಸಿ, ಸಿಂಡಿಕೇಟ್, ಕೆವಿಜಿಬಿ, ಬ್ಯಾಂಕ್ ಆಫ್ ಬರೋಡಾ, ಎಸ್ಬಿಐ, ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಟಿಎಂಎಸ್ನ ಅಧಿಕಾರಿಗಳಿದ್ದರು.