ನ್ಯೂಸ್

ಜಿಲ್ಲೆಯಲ್ಲಿ ಮುಂದುವರೆದ ಮಳೆ / ಟೊಮೆಟೋ, ಕ್ಯಾಪ್ಸಿಕಂ, ತರಕಾರಿ ಬೆಳೆಗಳಿಗೆ ಅಂಗಮಾರಿ ರೋಗದ ಭೀತಿ / ಹತೋಟಿಗೆ ಬರದ ರೋಗಗಳು / ಆತಂಕದಲ್ಲಿರುವ ರೈತರು

ವಿಜಯವಾಣಿ ಸುದ್ದಿಜಾಲ ಕೋಲಾರ

ಕಳೆದ ಒಂದು ವಾರದಿಂದ ಸುರಿದ ಮಳೆಯಿಂದಾಗಿ ತರಕಾರಿ ಬೆಳೆಗಳಿಗೆ ವಿವಿಧ ರೋಗಗಳು, ಟೊಮೆಟೋ ಬೆಳೆಗೆ ಅಂಗಮಾರಿ ರೋಗದ ಭೀತಿ ರೈತರನ್ನು ಕಾಡುತ್ತಿದ್ದು, ರೋಗಗಳನ್ನು ಹತೋಟಿಗೆ ತರಲು ರೈತರು ಹರಸಾಹಸ ಪಡುವಂತಾಗಿದೆ.

ಕೋಲಾರ ಜಿಲ್ಲೆಯಲ್ಲಿ ಟೊಮೆಟೋ ಬೆಳೆ ಜೊತೆಗೆ ವಿವಿಧ ತರಕಾರಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿದ ಮಳೆಯಿಂದಾಗಿ ತರಕಾರಿ ಬೆಳೆಗಳಿಗೆ ರೋಗರುಜಿನಗಳ ಕಾಟ ಹೆಚ್ಚಾಗಿದೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ನಾಟಿ ಮಾಡಿದ ಸಸಿಗಳು ಸಾಯುವ ಹಂತಕ್ಕೆ ತಲುಪಿತ್ತಿವೆ.

ಟೊಮೆಟೋ ಬೆಳೆಗೆ ತೇವಾಂಶ ಹೆಚ್ಚಾಗಿರುವ ಕಾರಣ ಅಂಗಮಾರಿ ರೋಗ ಆವರಿಸಿಕೊಳ್ಳುತ್ತಿದೆ. ರೋಗವನ್ನು ಹತೋಟಿಗೆ ತರಲು ಔಷಧಿ ಸಿಂಪಡಣೆಗೆ ರೈತರು ಮುಂದಾಗಿದ್ದು, ಮಳೆ ಇರುವ ಕಾರಣ ರೋಗ ಹತೋಟಿಗೆ ಬಾರದಂತೆ ಆಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಟೊಮೆಟೋ ಸೇರಿದಂತೆ ವಿವಿಧ ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಬೆಲೆ ಇರುವ ಸಂದರ್ಭದಲ್ಲಿ ಗುಣಮಟ್ಟದ ಬೆಳೆ ಮಾಡಲು ವೈರಸ್ ಸೇರಿದಂತೆ ವಿವಿಧ ರೋಗಗಳು ಆವರಿಸಿಕೊಳ್ಳುತ್ತಿವೆ.

ಕೋಲಾರ ಜಿಲ್ಲೆಯಲ್ಲಿ ವೈರಸ್ ಕಾಟ ಹೆಚ್ಚಾಗಿದ್ದು, ವೈರಸ್ ಮಧ್ಯೆಯೇ ರೈತರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಇದಕ್ಕೆ ತಕ್ಕ ಹಾಗೆ ಬೆಲೆಯು ಕುಸಿಯುತ್ತಿರುವುದರಿಂದ ರೈತರು ನಷ್ಟವನ್ನು ಹೆಚ್ಚಾಗಿ ಅನುಭವಿಸುತ್ತಿದ್ದಾರೆ. ಕಳೆದ ೨೦ ದಿನಗಳಿಂದ ಟೊಮೆಟೋ ಬೆಲೆ ಏರಿಕೆ ಕಂಡಿದ್ದು, ಆದರೆ ಈಗ ಸುರಿಯುತ್ತಿರುವ ಮಳೆಯಿಂದಾಗಿ ಟೊಮೆಟೋ ಬೆಳೆಗಳಿಗೆ ಅಂಗಮಾರಿ ರೋಗ ಕಾಣಿಸಿಕೊಂಡಿರುವುದು ರೈತರಲ್ಲಿ ಆತಂಕ ಉಂಟಾಗುವAತೆ ಆಗಿದೆ.

ಎಲೆಕೋಸು ಬೆಲೆ ಕುಸಿತ :

ನಿರಂತರ ಮಳೆಯಿಂದಾಗಿ ಕೊಯ್ಲಿಗೆ ಬಂದಿರುವ ಎಲೆಕೋಸು ಬೆಲೆ ಕುಸಿತ ಉಂಟಾಗಿದೆ. ಒಂದು ಲಾರಿ ಲೋಡ್ ಕೋಸು ೫೦ ಸಾವಿರಕ್ಕೆ ಕುಸಿದಿದೆ. ಒಂದು ಲಕ್ಷದಿಂದ ಒಂದೂವರೆ ಲಕ್ಷದ ತನಕ ಮಾರಾಟವಾಗುತ್ತಿದ್ದ ಲಾರಿ ಲೋಡ್ ಕೋಸಿನ ಬೆಲೆ ದಿಢೀರನೆ ಕುಸಿದಿದೆ. ಇದಕ್ಕೆ ಮಳೆಯೇ ಕಾರಣವಾಗಿದ್ದು, ತೇವಾಂಶ ಹೆಚ್ಚಾಗಿರುವುದಿಂದ ಎಲೆಕೋಸು ಕೊಳೆಯಲು ಪ್ರಾರಂಭಿಸಿದೆ.

ಬಾಕ್ಸ್

ಮಳೆ ಇನ್ನೂ ಒಂದು ವಾರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆಯ ಸೂಚನೆ ಇರುವುದರಿಂದ ರೈತರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ನಾಟಿ ಮಾಡಿರುವ ಟೊಮೆಟೋ ಸಸಿಗಳಿಗೆ ಅಂಗಮಾರಿ ರೋಗ ಆವರಿಸಿಕೊಂಡಿರುವುದರಿAದ ಮೊಳಕೆಯಲ್ಲಿಯೇ ಗಿಡಗಳು ಸಾಯುವ ಹಂತಕ್ಕೆ ತಲುಪಿವೆ. ಫಸಲು ಬರುವುದು ತೋಟಗಳಿಗೆ ಅಂಗಮಾರಿ ಆವರಿಸಿಕೊಂಡಿರುವುದರಿAದ ಇರುವ ಕಾಯಿ ಕೈಗೆ ಸಿಗದಂತೆ ಆಗುತ್ತಿದೆಂಬ ಭೀತಿ ರೈತರದ್ದಾಗಿದೆ.

ಕೋಟ್

ಟೊಮೆಟೋ, ಕ್ಯಾಪ್ಸಿಕಂ ಬೆಳೆಗಳಿಗೂ ಅಂಗಮಾರಿ ರೋಗ ಕಾಣಿಸಿಕೊಂಡಿದೆ. ಇದಕ್ಕೆಲ್ಲಾ ಮಳೆಯೇ ಕಾರಣ. ಎಷ್ಟೇ ಔಷಧಿ ಸಿಂಪಡಣೆ ಮಾಡಿದರೂ ರೋಗ ಹತೋಟಿಗೆ ಬರುತ್ತಿಲ್ಲ. ಮಾರುಕಟ್ಟೆಗೆ ಉತ್ತಮ ಬೆಲೆ ಇದೆ. ಆದರೆ ಫಸಲೇ ಇಲ್ಲದಂತೆ ಆಗುತ್ತಿದೆ. ಸೇವಂತಿಗೆ ಬೆಳೆಗೆ ಬೆಂಕಿರೋಗ ಕಾಣಿಸಕೊಂಡಿದೆ. ಮಾರುಕಟ್ಟೆಯಲ್ಲಿ ಸೇವಂತಿಗೆ ಹೂವಿಗೆ ಉತ್ತಮ ಬೆಲೆ ಇದೆ. ಆದರೆ ಮಳೆ ಹೆಚ್ಚಾದ ಕಾರಣ ಗಿಡಳಿಗೆ ಬೆಂಕಿ ರೋಗ ಕಾಣಿಸಿಕೊಂಡು ಗಿಡಗಳು ಒಣಗುತ್ತಿವೆ.

-ಸಂಪತ್, ರೈತ, ಕಿತ್ತಂಡೂರು.

ಕೋಟ್

ಅಂಗಮಾರಿ ರೋಗ ಇದೆ. ಆದರೆ ಅದನ್ನು ಔಷಧಿ ಸಿಂಪಡಣೆ ಮಾಡುವ ಮೂಲಕ ಹತೋಟಿಗೆ ತರಬಹುದು. ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಬೆಳೆಗಳಿಗೆ ಅಂಗಮಾರಿ ರೋಗ ಬಂದೇ ಬರುತ್ತದೆ. ಇಲಾಖೆಯಿಂದ ರೈತರಿಗೆ ಯಾವ ಔಷಧಿ ಸಿಂಪಡಣೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ರೈತರು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಔಷಧಿ ಖರೀದಿಸುವುದು ಉತ್ತಮ.

-ಕುಮಾರಸ್ವಾಮಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ.

ಚಿತ್ರ ೧೨ ಕೆ.ಎಲ್.ಆರ್. ೦೧ : ಅಂಗಮಾರಿ ರೋಗಕ್ಕೆ ತುತ್ತಾಗಿರುವ ಟೊಮೆಟೋ ಗಿಡಗಳು

ಚಿತ್ರ ೧೨ ಕೆ.ಎಲ್.ಆರ್. ೦೧ಎ : ಸಂಪತ್, ರೈತ, ಕಿತ್ತಂಡೂರು ರವರ ಭಾವಚಿತ್ರ

ಚಿತ್ರ ೧೨ ಕೆ.ಎಲ್.ಆರ್. ೦೧ಬಿ : ಕುಮಾರಸ್ವಾಮಿ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಕೋಲಾರ ರವರ ಭಾವಚಿತ್ರ