ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದ ಉಂಟಾಗಿರುವ ಹಾನಿ ಸಮೀಕ್ಷೆ ಸಂಬಂಧ ಕೇಂದ್ರ ವಿಪತ್ತು ಅಧ್ಯಯನ ತಂಡ ಶನಿವಾರ ಜಿಲ್ಲೆಯ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ತಂಡದ ಮುಖ್ಯಸ್ಥ ಕೇಂದ್ರದ ಮುಖ್ಯ ನಿಯಂತ್ರಕ ಸುಶಿಲ್ ಪಾಲ್, ಸದಸ್ಯ, ಕೃಷಿ ಇಲಾಖೆ ನಿರ್ದೇಶಕ ಸುಭಾಷ್‌ಚಂದ್ರ ಅವರನ್ನೊಳಗೊಂಡ ತಂಡದೊಂದಿಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು.
ಅಕ್ಟೋಬರ್‌ನಿಂದ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದ ಸಂಭವಿಸಿರುವ ಹಾನಿ ಕುರಿತು ಪಿಪಿಟಿ ಮೂಲಕ ಅಂಕಿ ಅಂಶಗಳನ್ನು ವಿಡಿಯೋ ತುಣುಕುಗಳ ಸಹಿತ ತಂಡಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳು ಮಾಹಿತಿ ನೀಡಿದರು.
ಪೋಟೊ ಗ್ಯಾಲರಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ಮಳೆ ಹಾನಿ ಬಗ್ಗೆ ಅಧಿಕಾರಿಗಳು ಕೇಂದ್ರದ ತಂಡಕ್ಕೆ ಸಮಗ್ರ ಮಾಹಿತಿ ನೀಡಿದರು.
ರಾಜ್ಯ ಕೆಎಸ್‌ಡಿಎರ್‌ಎ ಆಯುಕ್ತ ಡಾ.ಮನೋಜ್ ರಾಜನ್, ಕೃಷಿ ಅಪರ ನಿರ್ದೇಶಕ ಬಿ.ಬಸವರಾಜು, ತೋಟಗಾರಿಕಾ ಅಪರ ನಿರ್ದೇಶಕ ಬಿ.ಕೆ.ದುಂಡಿ, ಜಿಪಂ ಸಿಇಒ ಕೆ.ರೇವಣಪ್ಪ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ ಮತ್ತಿತರರು ಇದ್ದರು.
ಪರಿಹಾರ ಧನಕ್ಕೆ ಒತ್ತಡ ಹೇರಲಾಗುವುದು: ಅಕಾಲಿಕ ಮಳೆಯಿಂದ ಉಂಟಾದ ಬೆಳೆನಷ್ಟ ಅಂದಾಜಿಸಿ ಕೇಂದ್ರಕ್ಕೆ ವರದಿ ನೀಡಲು ಕೇಂದ್ರದಿಂದ ವಿಶೇಷ ತಂಡ ಆಗಮಿಸಿದ್ದು, ಜಿಲ್ಲೆಯ 4 ತಾಲೂಕುಗಳ ನಷ್ಟದ ಅಂದಾಜು ಪಟ್ಟಿ ಸಿದ್ಧಗೊಳ್ಳುತ್ತಿದ್ದು, ಪರಿಹಾರ ಧನ ಶೀಘ್ರ ಬಿಡುಗಡೆಗೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಜಿಲ್ಲೆಗೆ ಕೇಂದ್ರ ವಿಪತ್ತು ಅಧ್ಯಯನ ತಂಡ ಭೇಟಿ ಹಿನ್ನೆಲೆಯಲ್ಲಿ ದೇವನಹಳ್ಳಿಗೆ ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಅಕಾಲಿಕ ಮಳೆಯಿಂದ ಜಿಲ್ಲೆಯಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 1500 ಮನೆ ಕುಸಿದಿವೆ. ಮನೆ ಹಾನಿಯನ್ನು 3 ಭಾಗವಾಗಿ ಗುರುತಿಸಿದ್ದು. ಹಾನಿ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ದೊರೆಯಲಿದೆ ಎಂದರು.
ಅತಿಯಾದ ಮಳೆಯಿಂದ ಜಿಲ್ಲೆಯಲ್ಲಿ ಹಲವು ಕೆರೆಗಳು ಕೋಡಿಹರಿದು ಸುಮಾರು 150 ಕೋಟಿ ರೂ.ನಷ್ಟ ಉಂಟಾಗಿದೆ. ಈಗಾಗಲೇ 5 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಕೇಂದ್ರ ಸರ್ಕಾರ ಬಾಕಿ ಪರಿಹಾರ ಹಣ ಬಿಡುಗಡೆ ಮಾಡುವಂತೆ ಗಮನ ಸೆಳೆಯಲಾಗುವುದು ಎಂದರು.
ಕೆಲವು ಕಡೆಗಳಲ್ಲಿ ಕೆರೆ ಒತ್ತುವರಿಯಿಂದ ನೀರು ಸರಾಗವಾಗಿ ಹರಿಯದೆ ಸಮಸ್ಯೆ ಸೃಷ್ಟಿಯಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.