ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್.ಮುನಿವೆಂಕಟೇಗೌಡ
ಜಿಲ್ಲೆಯಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಮಳೆ ಹೆಚ್ಚಾಗಿ ಮನೆ ಮಠ ಮತ್ತು ಪ್ರಾಣ ಹಾನಿಗಳು ಸಂಭವಿಸುತ್ತಿದ್ದರು, ಬಯಲು ಸೀಮೆಯಾದ ಕೋಲಾರ ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿ ಒಂದು ಕಡೆ ಬಿತ್ತನೆಗೆ ಹಿನ್ನಡೆಯಾಗಿದ್ದರೆ, ಮತ್ತೊಂದೆಡೆ ಈಗಾಗಲೇ ಬಿತ್ತನೆ ಮಾಡಿರುವ ನೆಲಗಡಲೆ, ತೊಗರಿ, ರಾಗಿ ಪೈರು ಮಳೆ ಕೊರತೆಯಿಂದ ಒಣಗುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ಕಳೆದ ೧೫ ದಿವಸಗಳಿಂದ ಮೋಡ ಮುಚ್ಚಿದ ವಾತಾವರಣದೊಂದಿಗೆ ಬಿರುಗಾಳಿ ಬೀಸುತ್ತಿದೆ. ಮೋಡಗಳು ಬೆಳ್ಳಗ್ಗನಿಂದ ಸಂಜೆಯ ತನಕ ಕಾಣಿಸಿಕೊಂಡು ನಂತರ ಮಾಯವಾಗುತ್ತಿದೆ. ಅಲ್ಲಲ್ಲಿ ತುಂತುರು ಮಳೆ ಕಾಣಿಸಿಕೊಳ್ಳುತ್ತದೆ. ಈಗಾಗಲೇ ಬಿತ್ತನೆ ಮಾಡಿರುವ ನೆಲಗಡಲೆ, ತೊಗರಿ, ರಾಗಿ ಬೆಳೆಗೆ ಮಳೆ ಕೊರತೆಯಿಂದ ಮೊಳಕೆ ಒಡೆದು ಪೈರು ಬಂದಿರುವ ಹಂತದಲ್ಲಿಯೇ ಒಣಗತೊಡಗಿದೆ.
ಕೆಲವು ತಾಲ್ಲೂಕುಗಳಲ್ಲಿ ಅಲ್ಲಲ್ಲಿ ಮಳೆ ಬಿದ್ದಿದೆ. ಬಿತ್ತನೆ ಮಾಡಿರುವ ಕಾಳುಗಳು ಮೊಳಕೆ ಒಡೆದು ಚಿಗುರುತ್ತಿದೆ. ಇನ್ನು ಕೆಲವು ಮಳೆ ಇಲ್ಲದೆ ಆಗಿದ್ದು, ಬಿತ್ತನೆಗಾಗಿ ಕಾಯತೊಡಗಿದ್ದಾರೆ. ಈಗಾಗಲೇ ನೆಲಗಡಲೆ, ತೊಗರಿ, ಹಲಸಂದೆಗೆ ಕಾಲಾವಕಾಶ ಮುಗಿದಿದ್ದು, ರಾಗಿ ಬಿತ್ತನೆಗೆ ಮಾತ್ರ ಕಾಲಾವಕಾಶ ಇರುವುದಿರಿಂದ ರಾಗಿ ಬಿತ್ತನೆಗಾಗಿ ರೈತರು ಮಳೆಗಾಗಿ ಕಾಯತೊಡಗಿದ್ದಾರೆ.
ಮಳೆ ಬಂದAತೆ ಭಾಸವಾಗಿ ಸಂಜೆ ಮಾಯವಾಗುತ್ತಿದೆ. ಇದರ ಮಧ್ಯೆ ಬಿರುಗಾಳಿ ಹೆಚ್ಚಾಗಿ ಬೀಸತೊಡಗಿದೆ. ಬಂದ ಮಳೆ ಬಿರುಗಾಳಿ ಮಧ್ಯೆ ಚೆದುರಿಹೋಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.೨೫ ರಷ್ಟು ಬಿತ್ತನೆ ಕಾರ್ಯ ಆಗಿಲ್ಲ. ರಾಗಿ ಶೇ.೧೦ ರಷ್ಟು ಮಾತ್ರ ಬಿತ್ತನೆ ಆಗಿದೆ.
ಈಗಾಗಲೇ ಬಿತ್ತಿರುವ ವಿವಿಧ ಬೆಳೆಗಳು ಮೊಳಕೆ ಒಡೆದಿದ್ದು, ಬಂದಿರುವ ಪೈರು ಮಳೆಯಿಲ್ಲದೆ ಒಣಗುತ್ತಿರುವುದರಿಂದ ಮತ್ತೆ ಬಿತ್ತನೆ ಮಾಡಬೇಕಾಗುತ್ತದೆಯೋ ಎಂಬ ಆತಂಕ ರೈತರನ್ನು ಕಾಡತೊಡಗಿದೆ.
ಕಳೆದ ವರ್ಷದಂತೆಯೇ ಈ ವರ್ಷವೂ ಮಳೆ ಕೈಕೊಡುವ ಆತಂಕದಲ್ಲಿ ರೈತರದ್ದಾಗಿದೆ. ಕಳೆದ ವರ್ಷ ಪ್ರಾರಂಭದಲ್ಲಿ ಮಳೆಯಾಗಿ ಬಿತ್ತನೆ ಕಾರ್ಯಕ್ಕೆ ಮಳೆ ಕೈಕೊಟ್ಟ ಕಾರಣ ತಡವಾಗಿ ಬಿತ್ತಿದ ಬೆಳೆಗಳು ಕೈಗೆ ಸಿಗದಂತಾಗಿದ್ದು, ನಷ್ಟ ಅನುಭವಿಸುವಂತಾಯಿತು. ಈ ಬಾರಿಯೂ ಅದೇ ರೀತಿ ಮರುಕಳಿಸುವ ಸಾಧ್ಯತೆಗಳು ಗೋಚರವಾಗುತ್ತಿವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕೋಟ್
ಮಳೆ ಬಂದAತೆ ಕಂಡು ಸಂಜೆಯೊಳಗಾಗಿ ಮಾಯವಾಗುತ್ತಿದೆ. ರೈತರು ಬಿತ್ತನೆಗಾಗಿ ಬಿತ್ತನೆ ಬೀಜಗಳನ್ನು ಖರೀದಿಸಿ ಮಳೆಗಲಾಗಿ ಕಾಯತೊಡಗಿದ್ದಾರೆ. ಮುಂಗಾರಿನಲ್ಲಿ ಪ್ರಾರಂಭದಲ್ಲಿ ಉತ್ತಮ ಮಳೆಯಾಯಿತು. ಬಿತ್ತನೆ ಸಮಯಕ್ಕೆ ಇಲ್ಲದಂತೆ ಆಗಿದೆ. ರಾಜ್ಯದ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದರು, ಬಯಲು ಸೀಮೆಯ ಪ್ರದೇಶಗಳಲ್ಲಿ ಮಳೆ ಇಲ್ಲದಂತಾಗಿದೆ. ಆಗಸ್ಟ್ ತಿಂಗಳಿನಲ್ಲಾದರೂ ಮಳೆ ಬಂದರೆ ಕಡೆ ಬಿತ್ತನೆಯಾಗಿ ರಾಗಿ ಬಿತ್ತನೆ ಮಾಡಬಹುದಾಗಿದೆ.
-ನಾರಾಯಣಗೌಡ, ರೈತ, ಕೆಂಬೋಡಿ.
ಚಿತ್ರ ೦೧ ಕೆ.ಎಲ್.ಆರ್. ೦೪ : ರಾಗಿ ಪೈರು ಮಳೆಯಿಲ್ಲದೆ ಮೊಳಕೆಯಲ್ಲಿಯೇ ಒಣಗುತ್ತಿರುವುದು.
.