ವಿಜಯವಾಣಿ ಸುದ್ದಿಜಾಲ ಕೋಲಾರ
ರಾಜ್ಯಾದ್ಯಂತ ಅಲ್ಲಲ್ಲಿ ಉತ್ತಮವಾಗಿ ಮಳೆಯಾಗುತ್ತಿದ್ದರು ಕೋಲಾರ ಜಿಲ್ಲೆಯಲ್ಲಿ ಮಳೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದು, ಬಿತ್ತನೆಗೆ ಸೂಕ್ತವಾದ ಕಾಲಾವಕಾಶ ಇದ್ದರು ಮಳೆರಾಯನ ಕೃಪೆ ಕೋಲಾರ ಜಿಲ್ಲೆಗೆ ಇಲ್ಲದಂತೆ ಆಗಿದೆ.
ಕೋಲಾರ ಜಿಲ್ಲೆ ಮಳೆಯಾಶ್ರಿತ ಪ್ರದೇಶವಾಗಿದ್ದು, ಕೃಷಿಯೇ ಇಲ್ಲಿ ಪ್ರಧಾನವಾಗಿದೆ. ರಾಗಿ, ನೆಲಗಡಲೆ, ತೊಗರಿ, ಹಲಸಂದೆ, ಅವರೆ, ಹುರಳಿ ಹೆಚ್ಚಾಗಿ ಬೆಳೆಯುತ್ತಿದ್ದು, ಇವು ಮಳೆಯಾಶ್ರಿತ ಬೆಳೆಗಳಾಗಿವೆ. ಮಳೆಯನ್ನು ನಂಬಿ ಬದುಕುವಂತಹ ರೈತರು ಇದ್ದಾರೆ. ಆದರೆ ಮಳೆ ಕಳೆದ ಒಂದು ವಾರದಿಂದ ಕಣ್ಣಾಮುಚ್ಚಾಲೆ ಆಡುತ್ತಿದೆ. ಅಲ್ಲಲ್ಲಿ ತುಂತುರು ಮಳೆ ಕಾಣಿಸಿಕೊಂಡು ಮಾಯವಾಗುತ್ತಿದೆ.
ರೈತರು ಭೂಮಿಗಳನ್ನು ಹದ ಮಾಡಿಕೊಂಡು ಬಿತ್ತನೆಗಾಗಿ ಕಾಯತೊಡಗಿದ್ದಾರೆ. ಪ್ರತಿದಿನ ಮೋಡ ಮುಚ್ಚಿದ ವಾತಾವರಣ ಕಂಡು ಬಂದು, ಸಂಜೆ ವೇಳೆಗೆ ಅಲ್ಲಲ್ಲಿ ತುಂತುರು ಮಳೆ ಕಾಣಿಸಿಕೊಂಡು ಮಾಯವಾಗುತ್ತಿದೆ. ಬಿತ್ತನೆಗೂ ಸಾಕಾಗುವಷ್ಟು ಮಳೆ ಬೀಳದೆ ಇರುವುದರಿಂದ ಉಳುಮೆ ಮಾಡಲು ಸಹ ಆಗುತ್ತಿಲ್ಲ. ಬಿತ್ತನೆ ಮಾಡಲು ಆಗದ ಸ್ಥಿತಿ ಉಂಟಾಗಿದೆ.
ನೆಲಗಡಲೆ ಬಿತ್ತನೆಗೆ ಈಗಾಗಲೇ ಕಾಲಾವಕಾಶ ಮುಗಿಯುತ್ತಾ ಬಂದಿದ್ದರು, ಇನ್ನು ಮಳೆ ಬಾರದೆ ಇರುವುದರಿಂದ ಬಿತ್ತನೆ ಬೀಜಗಳನ್ನು ಶೇಖರಣೆ ಮಾಡಿಕೊಂಡಿರುವ ರೈತರು ಮಳೆ ಇನ್ನು ಬರುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡತೊಡಗಿದೆ. ನೆಲಗಡಲೆ ಬಿತ್ತನೆ ಮಾಡುವಷ್ಟು ಮಳೆ ಬಾರದೆ ಹೋದರೆ ಬಿತ್ತನೆ ಬೀಜಗಳು ಹಾಳಾಗುತ್ತವೆ ಎಂಬ ಭೀತಿ ರೈತರನ್ನು ಕಾಡತೊಡಗಿದೆ.
ರಾಗಿ, ತೊಗರಿ, ಹಲಸಂದೆ, ಅವರೆಗೆ ಇನ್ನು ಕಾಲಾವಕಾಶ ಇದೆ. ಆದರೆ ಮೊದಲ ಬಿತ್ತನೆ ಮಾಡಿದರೆ ಮಳೆ ಚೆನ್ನಾಗಿ ಬರುತ್ತದೆ, ಬೆಳೆಯೂ ಚೆನ್ನಾಗಿ ಆಗುತ್ತದೆಂಬುದು ರೈತರ ನಂಬಿಕೆಯಾಗಿದೆ. ಕಡೆಯದಾಗಿ ಬಿತ್ತನೆ ಮಾಡಿದರೆ ಮಳೆ ಸಾಕಾಗದೆ ಬೆಳೆ ಹಾಳಾಗುತ್ತದೆ ಎಂದು ರೈತರು ಪ್ರಾರಂಭದ ಬಿತ್ತನೆಗೆ ಆದ್ಯತೆ ನೀಡುತ್ತಾರೆ.
ಈಗ ಪ್ರಾರಂಭದ ಬಿತ್ತನೆಗೆ ಕಾಲಾವಕಾಸ ಪಕ್ವವಾಗಿರುವಾಗ ಮಳೆ ಕೈಕೊಡುತ್ತಿದೆ. ಹೀಗೆ ಇನ್ನು ೧೫ ದಿನಗಳು ಕಳೆದರೆ ಪ್ರಥಮ ಬಿತ್ತನೆ ಕೈಬಿಟ್ಟು ಕೊನೆ ಬಿತ್ತನೆಗೆ ಕಾಯಬೇಕಾಗುವ ಪರಿಸ್ಥಿತಿ ಬರುವ ಸಾಧ್ಯತೆ ಇದೆ. ಒಂದು ವಾರದ ಒಳಗಾಗಿ ಮಳೆ ಬಂದರೆ ಭೂಮಿ ಹದ ಮಾಡಿಕೊಂಡಿರುವ ಎಲ್ಲಾ ರೈತರು ಬಿತ್ತನೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂಬುದು ರೈತರ ಮಾತಾಗಿದೆ.
ಚಿತ್ರ ೨೬ ಕೆ.ಎಲ್.ಆರ್. ೦೩ : ಬಿತ್ತನೆಗಾಗಿ ಭೂಮಿಯನ್ನು ಹದ ಮಾಡಿಕೊಂಡಿರುವ ರೈತರು