ನ್ಯೂಸ್

ಜಿಲ್ಲೆಯಲ್ಲಿ ತಾಪಮಾನ ಹೆಚ್ಚಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂಜಾಗ್ರತಾ ಕ್ರಮ

ಅವಿನಾಶ್ ಜೈನಹಳ್ಳಿ ಮೈಸೂರು

ಬಿರು ಬಿಸಿಲು ಪ್ರಖರತೆಯನ್ನು ತೋರಿಸುವ ಮೂಲಕ ಬೇಸಿಗೆ ಬಂತು ಎಂದು ಜ್ಞಾಪಿಸುತ್ತಿದೆ. ಬಿಸಿಲಿನ ಝಳಕ್ಕೆ ಭೂಮಿಯೂ ಕಾದ ಬಾಣಲೆಯಾಗುತ್ತಿದ್ದೂ ವಾತಾವರಣದಲ್ಲಿ ಉಷ್ಣಾಂಶ ಏರುತ್ತಿರುವುದರಿಂದ ಜೀವ ಸಂಕುಲದ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆದೆ.

ಬೇಸಿಗೆಯಲ್ಲಿ ಪ್ರಮುಖವಾಗಿ ಕರುಳು ಸಂಬಂಧಿ ಕಾಯಿಲೆಗಳು ಹಾಗೂ ಸಾಂಕ್ರಾಮಿಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಕೆಲ ವರ್ಷಗಳಿಂದ ಬಿಸಿಲಾಘಾತ (ಹೀಟ್ ವೇವ್) ಪ್ರಕರಣಗಳು ಹೆಚ್ಚಾಗುತ್ತಿವೆ. ಇದಕ್ಕಾಗಿ ಆರೋಗ್ಯ ಇಲಾಖೆ ತಮ್ಮ ಎಲ್ಲ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬೇಸಿಗೆಯಲ್ಲಿ ಇಂತಹ ಪರಿಸ್ಥಿತಿ ಉಂಟಾದರೆ ಯಾವ ಕ್ರಮ ಕೈಗೊಳ್ಳಬೇಕು? ಪರಿಸ್ಥಿತಿ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಇರುವ ಮಾರ್ಗೋಪಾಯಗಳ ಬಗ್ಗೆ ಸಿಬ್ಬಂದಿಗೆ ತಿಳಿವಳಿಕೆ ನೀಡಿದೆ.

ಗ್ರಾಮ ನೈರ್ಮಲ್ಯ ಸಮಿತಿ ನಿಗಾ:

ಮೈಸೂರು ಜಿಲ್ಲೆಯಲ್ಲಿ 1,135 ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಗಳು ಇವೆ. ಇವುಗಳು ತಮ್ಮ ಗ್ರಾಮ ಮಟ್ಟದಲ್ಲಿ ಸ್ವಚ್ಛತೆ ಹಾಗೂ ಆರೋಗ್ಯ ಕುರಿತು ಯಾವಾಗಲೂ ಗಮನಿಸುತ್ತಿರುತ್ತವೆ. ಈ ಸಮಿತಿಯ ಸದಸ್ಯರು ಗ್ರಾಮಗಳಲ್ಲಿ ಕಸದ ರಾಶಿ ಬೀಳದ ರೀತಿ ನೋಡಿಕೊಳ್ಳುವುದು. ಚರಂಡಿ-ಮೋರಿಗಳು ತುಂಬಿಕೊಂಡು, ನೀರು ಒಂದು ಕಡೆ ನಿಲ್ಲದಂತೆ ಎಚ್ಚರವಹಿಸುವುದು. ಕುಡಿಯುವ ನೀರು ಶುದ್ಧವಾಗಿ ಸರಬರಾಜಾಗುವುದನ್ನು ಪರಿಶೀಲನೆ ನಡೆಸುವುದು ಸೇರಿದಂತೆ ಆರೋಗ್ಯ ಮತ್ತು ಸ್ವಚ್ಛತಾ ಸಂಬಂಧಿ ವಿಷಯಗಳತ್ತ ನಿಗಾ ಇಡುತ್ತಾರೆ.ಯಾವುದಾದರೂ ಸಮಸ್ಯೆ ಕಂಡು ಬಂದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಗಮನಕ್ಕೆ ವಿಷಯವನ್ನು ತಲುಪಿಸುತ್ತಾರೆ. ಸಮಿತಿಯ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಎಲ್ಲರೂ ಒಟ್ಟಾಗಿ ಗ್ರಾಮದ ಪ್ರತಿಯೊಂದು ಮನೆಗೂ ತೆರಳಿ, ಅಲ್ಲಿ ಯಾವ ರೀತಿ ಸ್ವಚ್ಛತೆಯನ್ನು ಕಾಪಾಡುತ್ತಿದ್ದಾರೆ ಎನ್ನುವುದು ಖುದ್ದಾಗಿ ನೋಡಿ, ಮನೆಯವರಿಗೆ ಅಗತ್ಯವಾದ ಸಲಹೆ-ಸೂಚನೆಗಳನ್ನು ನೀಡುತ್ತಿದ್ದಾರೆ.

ನೀರಿನಾಂಶ ಹೆಚ್ಚಿರಲಿ:

ಬೇಸಿಗೆಯು ತೀವ್ರ ದಾಹ ತರುತ್ತದೆ. ಆದರೆ ದಾಹವನ್ನು ನೀಗಿಸಿಕೊಳ್ಳಲು ಸಿಕ್ಕ-ಸಿಕ್ಕ ಕಡೆಯಲ್ಲಿ ಕತ್ತರಿಸಿದ ಹಣ್ಣು, ತಂಪು ಪಾನೀಯಗಳನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು.ಏಕೆಂದರೆ ಸುರಕ್ಷಿತವಲ್ಲದ ರೀತಿಯಲ್ಲಿ ಇಟ್ಟಿರುವ ಹಣ್ಣು-ಪಾನೀಯಗಳಿಂದ ಕಾಯಿಲೆ ಹರಡುವ ಸಂಭವ ಹೆಚ್ಚಾಗಿರುತ್ತದೆ. ಹಣ್ಣುಗಳ ಮೇಲೆ ನೋಣ ಸೇರಿದಂತೆ ಇನ್ನಿತರ ಕಾಣದ ಕ್ರಿಮಿ ಕೀಟಗಳು ಕುಳಿತುಕೊಳ್ಳುವುದರಿಂದ ಅವುಗಳು ರೋಗವಾಹಕಗಳಾಗಿ ಮಾರ್ಪಾಟು ಹೊಂದಿರುತ್ತವೆ. ಆದ್ದರಿಂದ ಜನರು ಜಾಗ್ರತೆಯಿಂದ ಇರಬೇಕು ಎನ್ನುವಂತಹ ಸೂಚನೆಗಳನ್ನು ಸಮಿತಿಯು ಜನರಿಗೆ ತಿಳಿಸುತ್ತದೆ. ಯಾವಾಗಲೂ ಕುದಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಆಹಾರ ಸೇವಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಇನ್ನೂ ಹಲವಾರು ಆರೋಗ್ಯ ಕ್ರಮಗಳನ್ನು ಗ್ರಾಮ ನೈರ್ಮಲ್ಯ ಸಮಿತಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಜನರಿಗೆ ತಿಳಿಸುತ್ತಾರೆ.

ಓಆರ್‌ಎಸ್ ಪ್ಯಾಕೆಟ್ ಸಂಗ್ರಹ:

ಸುಡು ಬಿಸಿಲಿಗೆ ಮಕ್ಕಳು, ವಯೋವೃದ್ಧರಲ್ಲಿ ನಿರ್ಜಲೀಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಂತಹವರಿಗೆ ಓಆರ್‌ಎಸ್ ದ್ರಾವಣವೇ ಅಮೃತಕ್ಕೆ ಸಮ. ಇದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರಗಳಲ್ಲಿ ಓಆರ್‌ಎಸ್ ದ್ರಾವಣದ ಪೊಟ್ಟಣವನ್ನು ಸಂಗ್ರಹಿಸಿ ಇಡಲಾಗಿದೆ. ಜಿಲ್ಲೆಯಲ್ಲಿ 510 ಆರೋಗ್ಯ ಉಪ ಕೇಂದ್ರಗಳು ಇದ್ದು, ಇವುಗಳಲ್ಲಿ ತಲಾ ಒಂದರಿಂದ ಒಂದೂವರೆ ಸಾವಿರ ಓಆರ್‌ಎಸ್ ಪೊಟ್ಟಣವನ್ನು ಸಂಗ್ರಹಿಸಿ ಇಡಲಾಗಿದೆ. ಈ ಸಂಗ್ರಹವೂ ಮುಗಿಯುತ್ತಿದ್ದಂತೆ ಮತ್ತೆ ನೀಡಲಾಗುತ್ತದೆ. ವಿಶೇಷ ಆರೈಕೆಗೆ ಹಾಸಿಗೆ ಮೀಸಲು :

ಹೀಟ್ ವೇವ್ ಹಾಗೂ ಕರುಳು ಸಂಬಂಧಿ ಕಾಯಿಲೆಗಳ ಪ್ರಕರಣಗಳು ಕಂಡುಬಂದರೆ ಅವರನ್ನು ವಿಶೇಷವಾಗಿ ಆರೈಕೆ ಮಾಡಲು ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎರಡು ಹಾಸಿಗೆಯನ್ನು ಪ್ರತ್ಯೇಕವಾಗಿ ಇಡಲಾಗಿದೆ. ತಾಲೂಕು ಆಸ್ಪತ್ರೆಗಳಲ್ಲಿ 5 ಹಾಸಿಗೆಯನ್ನು ಮೀಸಲು ಇಡಲಾಗಿದೆ.

ಜನರು ಅನಗತ್ಯವಾಗಿ ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ಓಡಾಡಬಾರದು. ವೈಯಕ್ತಿ ಸ್ವಚ್ಛತೆಗೆ ಕಟ್ಟುನಿಟ್ಟಿನ ಗಮನ ಹರಿಸಬೇಕು. ಬೀದಿ ಬದಿಯಲ್ಲಿ ಸುರಕ್ಷಿತ ಕ್ರಮಗಳನ್ನು ಅನುಸರಿಸದೇ ಮಾರಾಟ ಮಾಡುವ ಹಣ್ಣುಗಳನ್ನು ತಿನ್ನಲು ಹೋಗಬಾರದು. ಮನೆಯ ಸುತ್ತಮುತ್ತಲಿನ ವಾತಾವರಣವನ್ನು ಆದಷ್ಟೂ ಚನ್ನಾಗಿ ಇಟ್ಟುಕೊಳ್ಳಬೇಕು. ಈ ಕ್ರಮಗಳಿಂದ ವಿವಿಧ ರೀತಿಯ ಕಾಯಿಲೆಗಳು ಬರುವುದನ್ನು ತಡೆಗಟ್ಟಬಹುದು. ಡಾ.ಪಿ.ಸಿ.ಕುಮಾರಸ್ವಾಮಿ ಡಿಎಚ್‌ಒ