ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರದಲ್ಲಿ ಮುಂದುವರೆದ ಮುಂಗಾರು ಮಳೆ ಭಾನುವಾರ ಎಡೆಬಿಡದೆ ಜಡಿ ಮಳೆ ಮುಂದುವರೆದಿತ್ತು. ಶನಿವಾರ ರಾತ್ರಿಯಿಂದ ಪ್ರಾರಂಭವಾಗಿರುವ ಜಡಿಮಳೆ ಭಾನುವಾರ ಸಂಜೆಯ ತನಕವೂ ಸುರಿಯುತ್ತಲೇ ಇತ್ತು.
ಶನಿವಾರ ಸ್ವಲ್ಪ ಬಿಡುವು ನೀಡಿದ ಮಳೆ ರಾತ್ರಿಯಿಂದ ಸುರಿಯುತ್ತಲೇ ಇದೆ. ಜೋರು ಮಳೆ ಇಲ್ಲದಿದ್ದರು ಜಡಿ ಮಳೆ ಜೊತೆಗೆ ಆಗಾಗ ಜೋರು ಮಳೆ ಬೀಳುತ್ತಿದೆ. ಟೊಮೆಟೋ ಸೇರಿದಂತೆ ತರಕಾರಿ ಬೆಳೆಗಳಿಗೆ ತೇವಾಂಶ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಮಳೆಯಿಂದಾಗಿ ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಬಾರದಂತೆ ಆಗಿದೆ.
ಹೂಕೋಸು, ಟಮೆಟೋ ಬೆಳೆಗಾರರಿಗೆ ಆತಂಕ ಶುರುವಾಗಿದೆ. ಮಳೆ ಹೀಗೇ ಮುಂದುವರೆದರೆ ಟಮೆಟೋಗೆ ಅಂಗಮಾರಿ ಮತ್ತು ಬೆಂಕಿ ರೋಗ ಬರುವ ಸಾಧ್ಯತೆ ಇದೆ. ಈಗಾಗಲೇ ಕೆಲವು ತೋಟಗಳಲ್ಲಿ ರೋಗಗಳು ಕಾಣಿಸಿಕೊಂಡಿವೆ. ಹೂಕೋಸು ಕಟಾವಿಗೆ ಬಂದಿರುವ ರೈತರು ಮಳೆಯಿಂದಾಗಿ ಕಟಾವು ಮಾಡಲು ಸಾಧ್ಯವಾಗದೆ ತೋಟಗಳಲ್ಲಿಯೇ ಕೊಳೆಯುವಂತಾಗಿದೆ. ತೇವಾಂಶ ಹೆಚ್ಚಾಗಿರುವ ಕಾರಣ ಬೆಲೆಯೂ ದಿಢೀರನೆ ಕುಸಿದಿದೆ.
ಹೀಗೆ ಮಳೆ ಮುಂದುವರೆದರೆ ತರಕಾರಿಗಳು ಗುಣಮಟ್ಟ ಕಳೆದುಕೊಳ್ಳಲಿವೆ. ಔಷಧಿಗಳು ಸಿಂಪಡಣೆ ಮಾಡಿದರೂ ರೋಗಗಳು ಹತೋಟಿಗೆ ಬರುವುದು ಅಸಾಧ್ಯ ಎನ್ನುವಂತಾಗಿದೆ. ಭಾನುವಾರ ಪೂರ್ತಿ ದಿನ ಮೋಡ ಮುಚ್ಚಿದ ವಾತಾವರಣದ ಜೊತೆಗೆ ಮಳೆ ಎಡೆಬಿಡದೆ ಬೀಳುತ್ತಲೇ ಇದ್ದ ಕಾರಣ ಜನ ಜೀವನ ಅಸ್ತವ್ಯಸ್ತವಾಗಿತ್ತು.
ಬಿತ್ತನೆ ಕಾರ್ಯಕ್ಕೆ ಹಿನ್ನಡೆ :
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಕಾರ್ಯಕ್ಕೂ ಹಿನ್ನಡೆ ಉಂಟಾಗಿದೆ. ಆಗಾಗ ಬಿಡುವು ನೀಡಿದ ಸಂದರ್ಭದಲ್ಲಿ ಬಿತ್ತನೆ ಕಾರ್ಯ ಮಾಡಲು ತೇವಾಂಶ ಹೆಚ್ಚಾಗಿದೆ. ಕೆಲವು ತಾಲ್ಲೂಕಿನಲ್ಲಿ ಇನ್ನು ಸರಿಯಾಗಿ ಮಳೆಯಾಗದ ಕಾರಣ ಬಿತ್ತನೆ ಕಾರ್ಯವೂ ಚುರುಕುಗೊಂಡಿಲ್ಲ. ಮಳೆ ಹೆಚ್ಚಾಗಿ ಬಿದ್ದಿರುವ ತಾಲ್ಲೂಕುಗಳಲ್ಲಿ ತೇವಾಂಶದಿAದ ಬಿತ್ತನೆ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ.