ನ್ಯೂಸ್

ಜಿಲ್ಲೆಯ ಗ್ರಾಮೀಣ ಭಾಗದ ದೊಡ್ಡ ದೊಡ್ಡ ಗ್ರಾಮಗಳಲ್ಲಿ ನಂದಿನಿ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲು ಚಿಂತನೆ / ಕೆ.ವೈ.ನಂಜೇಗೌಡ

ವಿಜಯವಾಣಿ ಸುದ್ದಿಜಾಲ ನರಸಾಪುರ

ಅಮೇರಿಕ ಸೇರಿದಂತೆ ರಾಜ್ಯಾದ್ಯಂತ ಕೆ.ಎಂ.ಎಫ್. ವತಿಯಿಂದ ೫೦೦ ನಂದಿನಿ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ. ಇದರ ಭಾಗವಾಗಿ ಕೋಮುಲ್ ವತಿಯಿಂದ ಕೋಲಾರ ಜಿಲ್ಲೆಯಲ್ಲಿ ೩೦ ನಂದಿನಿ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲಾಗಿದೆ ಎಂದು ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ತಿಳಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಬುಧವಾರ ಕಲಬುರಗಿಯಲ್ಲಿ ೫೦೦ ನಂದಿನಿ ಮಾರಾಟ ಮಳಿಗೆಗಳನ್ನು ವರ್ಚ್ಯುಯೆಲ್ ಮೂಲಕ ಉದ್ಘಾಟನೆ ಮಾಡಿದ ಭಾಗವಾಗಿ ಕೋಲಾರ ಜಿಲ್ಲೆಯ ಕೋಲಾರ ಬೆಂಗಳೂರು ರಸ್ತೆಯ ರಾಮಸಂದ್ರಗೇಟ್ ಬಳಿ ನೂತನ ನಂದಿನಿ ಮಾರಾಟ ಮಳಿಗೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಕೋಮುಲ್ ಅಧ್ಯಕ್ಷ ನಂಜೇಗೌಡ ಅಮೇರಿಕ ದೇಶದಲ್ಲಿ ಒಂದು ನಂದಿನಿ ಮಳಿಗೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿದೆ. ಅದಕ್ಕೆ ಕಾರಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ೨೦೧೩ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಉತ್ತೇಜನ ಮತ್ತು ಹಾಲು ಒಕ್ಕೂಟಗಳ ಅಭಿವೃದ್ದಿಗೆ ತೆಗೆದುಕೊಂಡ ಕ್ರಮಗಳಿಂದಾಗಿ ಇಂದು ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಲು ಕಾರಣವಾಗಿದೆ ಎಂದರು.

ಈ ಹಿಂದೆ ಹಾಲು ಉತ್ಪಾದನೆ ಹೆಚ್ಚಾದ ಸಂದರ್ಭದಲ್ಲಿ ಉತ್ಪಾದಕರಿಗೆ ರಜೆ ನೀಡುತ್ತಿದ್ದ ಸಂದರ್ಭಗಳು ಇದ್ದವು. ಮತ್ತು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಆಗದ ದಿನಗಳು ಇದ್ದವು. ಶಾಲಾ ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆ ಜಾರಿಗೆ ತರುವ ಮೂಲಕ ಹಾಲು ಉತ್ಪಾದಕರಿಗೆ ರಜೆ ನೀಡದೆ ಹಾಲಿನ ಬೆಲೆಯನ್ನು ಹೆಚ್ಚಿಸಿ ೫ ರೂ.ಗಳ ಪ್ರೋತ್ಸಾಹ ಧನವನ್ನು ನೀಡುವ ಮೂಲಕ ಹಾಲು ಉತ್ಪಾದನೆಗೆ ಒತ್ತು ನೀಡಿದರು.

ಮುಖ್ಯಮಂತ್ರಿಗಳು ಸಿದ್ಧರಾಮಯ್ಯ ೨ನೇ ಬಾರಿಗೆ ಮುಖ್ಯಮಂತ್ರಿ ಆದ ನಂತರ ಉತ್ಪಾದಕರಿಗೆ ೩ ರೂ.ಗಳನ್ನು ಹೆಚ್ಚಿಗೆ ಮಾಡಿ ನೇರವಾಗಿ ಉತ್ಪಾದಕರಿಗೆ ಸೇರುವಂತೆ ಮಾಡಿದರು. ಇತ್ತೀಚೆಗೆ ಗ್ರಾಹಕರಿಗೆ ೪ ರೂ.ಗನ್ನು ಹೆಚ್ಚಿಗೆ ಮಾಡಿ, ಅದನ್ನೂ ಸಹ ಉತ್ಪಾದಕರಿಗೆ ಸೇರುವಂತೆ ಮಾಡಿದರು. ಗ್ರಾಹಕರಿಗೆ ಹೆಚ್ಚಿಗೆ ಮಾಡಿ ಉತ್ಪಾದಕರಿಗೆ ನೀಡುತ್ತಿದ್ದುದ್ದು ಅನುಮಾನ ಮೂಡುವಂತೆ ಆಯಿತು. ಆದರೆ ಹೊರ ರಾಜ್ಯದ ಬೆಲೆಗಿಂದ ೧೦ ರೂ.ಗಳ ವ್ಯತ್ಯಾಸದಿಂದ ನಮ್ಮ ಗ್ರಾಹಕರಿಗೆ ಒಕ್ಕೂಟದಿಂದ ಕಡಿಮೆ ಬೆಲೆಯಲ್ಲಿ ಕೊಡುತ್ತಿದ್ದೇವೆ ಎಂಬುದು ಅರ್ಥವಾಯಿತು.

ಹಾಲು ಉತ್ಪಾದನೆ ಹೆಚ್ಚಾದ ನಂತರ ಮಾರುಕಟ್ಟೆಯ ವಿಸ್ತಾರವನ್ನು ಹೊರ ರಾಜ್ಯಗಳಿಗೆ ವಿಸ್ತರಿಸಲಾಯಿತು. ಈಗ ವಿದೇಶಗಳಿಗೂ ಕಳುಹಿಸಿಕೊಡಲಾಗುತ್ತಿದೆ. ಮುಖ್ಯಮಂತ್ರಿಗಳು ತೆಗೆದುಕೊಂಡ ತೀರ್ಮಾನವಾಗಿದ್ದು, ನಂದಿನಿ ಹಾಲಿನಿಂದ ತಯಾರಿಸುವ ಉತ್ಪನ್ನಗಳನ್ನು ಎಲ್ಲಾ ಕಡೆಯೂ ಸಿಗುವಂತೆ ಮಾಡುವ ದೃಷ್ಟಿಯಿಂದ ರಾಜ್ಯಾದ್ಯಂತ ನಂದಿನಿ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಿ ನಂದಿನಿಯ ೧೫೦ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪುವಂತೆ ಮಾಡಲಾಗುತ್ತಿದೆ ಎಂದರು.

ನಂದಿನಿ ಉತ್ಪನ್ನಗಳು ಗ್ರಾಮೀಣ ಭಾಗದ ಕಿರಾಣಿ ಅಂಗಡಿಗಳಲ್ಲಿ ಸಿಗುವಂತೆ ಮಾಡಿದಲ್ಲಿ ನಮ್ಮ ಮಾರುಕಟ್ಟೆ ವಿಸ್ತಾರವಾಗಲು ಸಾಧ್ಯವಾಗುತ್ತದೆ. ಕೆಲಸವನ್ನು ವನ್ನು ನಮ್ಮ ಕೋಮುಲ್‌ನಿಂದ ಮುಂದಿನ ದಿನಗಳಲ್ಲಿ ಮಾಡಲಾಗುವುದು.

ಮುಖ್ಯಮಂತ್ರಿಗಳ ಮನವಿ :

ಒಕ್ಕೂಟ ವ್ಯಾಪ್ತಿಗಳಿಗೆ ನೀಡಿರುವ ಮಾರುಕಟ್ಟೆಯ ವಿಸ್ತೀರ್ಣದಲ್ಲಿ ಸರ್ಕಾರಿ ಕಛೇರಿಗಳು ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಪ್ರಾರಂಭಿಸಲು ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿತ್ತು. ಆ ಕೆಲಸವನ್ನು ಮುಖ್ಯಮಂತ್ರಿಗಳು ಈಗ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಹೆಚ್ಚಿಗೆ ಮಾಡುವ ಕ್ರಮ ಕೈಗೊಂಡಿದ್ದಾರೆ ಎಂದರು.

ನಮ್ಮ ೨ನೇ ಬಾರಿಯ ಆಡಳಿತ ಮಂಡಳಿ ಸಭೆಯಲ್ಲಿ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಕೋಮುಲ್ ವಿಭಜನೆಯಾದ ನಂತರ ಹಾಲು ಉತ್ಪಾದನೆ ಹೆಚ್ಚಿಗೆ ಮಾಡಲು ಪ್ರತಿ ಗ್ರಾಮದಲ್ಲಿ ಹಾಲಿನ ಡೈರಿಗಳನ್ನು ಸ್ಥಾಪನೆ ಮಾಡುವುದು. ಪ್ರತಿ ಹಾಲಿನ ಡೈರಿಗಳಲ್ಲಿ ಕಾಮನ್ ಸಾಫ್ಟ್ವೇರ್ ಪ್ರಾರಂಭಿಸುವುದು. ಮಾರುಕಟ್ಟೆಯ ವಿಸ್ತೀರ್ಣಕ್ಕೆ ಕ್ರಮಗೊಳ್ಳಲು ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ.

ಜಿಲ್ಲಾ ಕೇಂದ್ರಗಳಲ್ಲಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಹೆಚ್ಚಾಗಿ ತೆರೆಯುವುದು. ತಾಲ್ಲೂಕು, ಹೋಬಿಳಿ, ಪಂಚಾಯ್ತಿ ಮಟ್ಟಕ್ಕೆ ವಿಸ್ತರಿಸುವುದು. ಹಾಗೂ ದೊಡ್ಡ ದೊಡ್ಡ ಹಳ್ಳಿಗಳಲ್ಲಿ ಪಾರ್ಲರ್‌ಗಳನ್ನು ತೆರೆಯಲು ಸರ್ವೇ ನಡೆಸಲು ಸೂಚಿಸಲಾಗಿದೆ ಎಂದರು.

ಕೋಮುಲ್ ನಿರ್ದೇಶಕರಾದ ಎನ್.ಹನುಮೇಶ್, ಚಲುವನಹಳ್ಳಿ ನಾಗರಾಜ್, ಕಾಂತಮ್ಮ, ಕೋಮುಲ್ ವ್ಯವಸ್ಥಾಪಕ ಗೋಪಾಲಮೂರ್ತಿ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ ೧೭ ಕೆ.ಎಲ್.ಆರ್. ೦೨ : ಕೋಲಾರ ತಾಲ್ಲೂಕು ನರಸಾಪುರ ಹೋಬಳಿಯ ರಾಮಸಂದ್ರ ಗೇಟ್ ಬಳಿ ನೂತನ ನಂದಿನಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿದ ಕೋಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ, ವ್ಯವಸ್ಥಾಪಕ ಗೋಪಾಲಮೂರ್ತಿ ಮುಂತಾದವರು ಇದ್ದರು.