ನ್ಯೂಸ್

ಜಿಲ್ಲೆಯ ಗಣಿ ಮಾಲೀಕರು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು / ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ಗಣಿ ಮತ್ತು ಕ್ವಾರಿಗಳ ಮಾಲೀಕರು ಕಾನೂನಿನ ನಿಯಮಾವಳಿಗಳನ್ನು ಪಾಲಿಸಿ ಅದ್ದುಬಸ್ತು ಮೀರದೆ ತಮ್ಮ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೆಚ್ಚರಿಕೆ ನೀಡಿದರು.

ಕೋಲಾರ ಜಿಲ್ಲಾಡಳಿತ, ಬೆಂಗಳೂರು ಪ್ರದೇಶ ಗಣಿ ಸುರಕ್ಷತಾ ಮಹಾ ನಿರ್ದೇಶನಾಲಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೋಲಾರ ಮತ್ತು ಅಪೂರ್ವ ಎಂಟರ್‌ಪ್ರೈಸಸ್, ಬೆಂಗಳೂರಿನ ಸಹಯೋಗದೊಂದಿಗೆ ಬುಧವಾರ ಕೋಲಾರ ಜಿಲ್ಲೆಯ ಗಣಿ ಮಾಲೀಕರು, ಶಾಸನಬದ್ಧ ವ್ಯಕ್ತಿಗಳು, ಕಾರ್ಮಿಕರು ಮತ್ತು ಗಣಿ ನೌಕರರಿಗೆ ಏರ್ಪಡಿಸಲಾಗಿದ್ದ ಸುರಕ್ಷತಾ ಜಾಗೃತಿ ಕಾರ್ಯಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮೊದಲಿಗೆ ಕ್ವಾರಿಗಳ ಹಂತಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಜಿಲ್ಲೆಯ ಎಲ್ಲಾ ಗಣಿ ಮಾಲೀಕರು ಮತ್ತು ಕಾರ್ಮಿಕರಿಗೆ ಜಿಲ್ಲಾ ಮಟ್ಟದಲ್ಲಿ ಸುರಕ್ಷತೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸರ್ಕಾರವು ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲು ಆದಾಯ ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಗಣಿ ಮಾಲೀಕರು ತಳಮಟ್ಟದಿಂದ ಇಲಾಖೆಯನ್ನು ಬಲಿಷ್ಟಗೊಳಿಸಬೇಕು ಎಂದರು.

ನಮ್ಮ ಜಿಲ್ಲೆಯಲ್ಲಿ ಗಣಿ ಕಾರ್ಮಿಕರಿಗೆ ಯಾವುದೇ ಅಪಾಯಗಳು ಆಗದಂತೆ ಇನ್ನಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಮಾಲೀಕರು ಗಣಿ ಕಾಮಗಾರಿಯನ್ನು ಮಾಡುವಾಗ ಸ್ವತಃ ತಾವೇ ಹಾಜರಿದ್ದು, ಅವರ ಸಮಸ್ಯೆಗಳನ್ನು ಅಲಿಸಬೇಕು ಮತ್ತು ಸ್ಥಳೀಯ ಜನರೊಂದಿಗೆ ಕೆಲಸ ಮಾಡುವ ಕಾರ್ಮಿಕರೊಂದಿಗೆ ಉತ್ತಮ ಬಾಂಧವ್ಯ ಬೆಳಸಿಕೊಂಡು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ನಿಖಿಲ್ ಮಾತನಾಡಿ, ಗಣಿಯ ಮಾಲೀಕರು ಹಾಗೂ ಗಣಿ ನೌಕರರು ಯಾವ ರೀತಿ ಸುರಕ್ಷತೆಯಿಂದ ಗಣಿಗಾರಿಕೆ ಮಾಡಬೇಕು ಎಂಬುದು ಈ ಕಾರ್ಯಾಗಾರದ ಉದ್ದೇಶವಾಗಿದೆ. ಪ್ರತಿನಿತ್ಯ ಗಣಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಗಳನ್ನು ಮಾಲೀಕರು ಸ್ಥಳದಲ್ಲಿ ಇದ್ದು ತಿಳಿದುಕೊಳ್ಳಬೇಕು. ಸುರಕ್ಷತಾ ಬಗ್ಗೆ ಕಾಳಜಿ ವಹಿಸದಿದ್ದರೆ, ನಮಗೆ ತಿಳಿಯದೇ ಸಮಸ್ಯೆಗಳು ಆಗುತ್ತದೆ. ಆದ್ದರಿಂದ ಮಾಲೀಕರು ಮತ್ತು ಕಾರ್ಮಿಕರು ಕೇವಲ ಕಾನೂನಿನ ಪ್ರಕಾರ ಇರುವುದು ಮಾತ್ರವಲ್ಲದೆ ಸುರಕ್ಷತೆಯಿಂದ ಕೂಡ ಇರಬೇಕು ಎಂದು ತಿಳಿಸಿದರು.

ಗಣಿ ಮಾಲೀಕರು ಮತ್ತು ಕಾರ್ಮಿಕರೊಂದಿಗೆ ಜಿಲ್ಲಾಡಳಿತ ಇರುತ್ತದೆ ತಾವು ಸಮಾಜದಲ್ಲಿ ಉತ್ತಮ ವಾತಾವರಣ ಬೆಳೆಸುವ ಗುಣ ಇಟ್ಟುಕೊಳ್ಳಬೇಕು ಜೀವಹಾನಿ ಆಗದಂತೆ ನೋಡಿಕೊಳ್ಳಬೇಕು ಎಂದರು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಕೋಲಾರ ಜಿಲ್ಲೆಯ ನಿರ್ದೇಶಕರಾದ ಕೋದಂಡರಾಮ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಬೆಂಗಳೂರು ತಾಂತ್ರಿಕ ನಿರ್ದೇಶಕರಾದ ಆರ್ಮುಗಂ, ಸಾಕಿಬ್ ಭಾರತಿ, ಡಿವೈಎಸ್ಪಿ ಜಗದೀಶ್, ಗಣಿ ಮಾಲೀಕರು ಸಂಘದ ಅಧ್ಯಕ್ಷರಾದ ವೆಂಕಟೇಶಪ್ಪ, ಪ್ರಧಾನ ಕಾರ್ಯದರ್ಶಿ ರಮೇಶ್ ಗೌಡ, ಉಪಾಧ್ಯಕ್ಷರಾದ ಸತೀಶ್ ರಾಜಣ್ಣ, ಅಪೂರ್ಣ ಎಂಟರ್ ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕರಾದ ಸಂಜೀವ್ ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಚಿತ್ರ ೦೪ ಕೆ.ಎಲ್.ಆರ್. ೦೪ : ಗಣಿ ಮಾಲೀಕರು ಮತ್ತು ಕಾರ್ಮಿಕರಿಗೆ ಜಿಲ್ಲಾ ಮಟ್ಟದಲ್ಲಿ ಸುರಕ್ಷಿತ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಂ.ಆರ್.ರವಿ ಉದ್ಘಾಟಿಸಿದರು. ಎಸ್.ಪಿ.ಬಿ.ನಿಖಿಲ್ ಮುಂತಾದವರು ಇದ್ದರು.