ಕೋಲಾರ : ಜಿಲ್ಲೆಯಲ್ಲಿನ 44 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ತೆರೆಯಲಾಗಿದ್ದು, ಈ ಮೂಲಕ ಒಂದನೇ ತರಗತಿಗೆ ದಾಖಲಾತಿ ಆರಂಭವಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಹೇಳಿದರು.
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಒಂದನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಈ ಶೈಕ್ಷಣಿಕ ವರ್ಷದಿಂದಲೇ ಆಂಗ್ಲ ಮಾಧ್ಯಮ ಆರಂಭವಾಗುತ್ತಿರುವುದರಿಂದ ಪಾಲಕರಲ್ಲಿ ಜಾಗೃತಿ ಉಂಟು ಮಾಡಬೇಕಾಗಿದೆ. ಆಗ ನಿರೀಕ್ಷೆಗೂ ಮೀರಿ ದಾಖಲಾತಿ ಆಗುವ ಸಾಧ್ಯತೆ ಇದೆ. ಶಾಲೆಗಳಲ್ಲಿ ದೊರೆಯುವ ಸೌಲಭ್ಯ ಶಿಕ್ಷಣದ ಗುಣಮಟ್ಟ ಸೇರಿ ವಿಶೇಷತೆಗಳ ಬಗ್ಗೆ ಪಾಲಕರಿಗೆ ಮನೆ ಮನೆ ಭೇಟಿ, ಜಾಥಾ ಮುಖಾಂತರ ಜಾಗೃತಿ ಮೂಡಿಸಬೇಕು ಎಂದರು.
ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸುತ್ತಿರುವುದು ಸಂತಸದ ವಿಷಯವಾಗಿದ್ದು, ಪಾಲಕರು ಈ ಬಗ್ಗೆ ಚಿಂತನ ಮಂಥನ ನಡೆಸಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದರು.ಗ್ರಾಪಂ ಉಪಾಧ್ಯಕ್ಷ ನರೇಂದ್ರ ಬಾಬು ಮಾತನಾಡಿ, ಆಂಗ್ಲ ಮಾಧ್ಯಮ ಆರಂಭಿಸುವ ಶಿಕ್ಷಣ ಇಲಾಖೆಯ ಮಹತ್ವದ ನಿರ್ಧಾರ ಸ್ವಾಗತಾರ್ಹ. ಶಿಕ್ಷಣಕ್ಕೆ ಸರ್ಕಾರ ನೀಡುವ ಎಲ್ಲ ಸೌಲಭ್ಯ ಪಡೆಯಲು ಪಾಲಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತಾಗಬೇಕು ಎಂದರು.
ಮುಖ್ಯಶಿಕ್ಷಕ ಜಿ.ಶ್ರೀನಿವಾಸ್ ಮಾತನಾಡಿ, 1ನೇ ತರಗತಿಗೆ ಇಷ್ಟು ದಿನ ಕನ್ನಡ ಮಾಧ್ಯಮ ಬೋಧನೆ ಮಾಡುತ್ತಿದ್ದು, ಇದರೊಂದಿಗೆ ಇಂಗ್ಲಿಷ್ ಮಾದ್ಯಮವನ್ನು ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಪ್ರಾಮಾಣಿಕ ಪ್ರಯತ್ನದಲ್ಲಿ ಶಿಕ್ಷಕರು ಉತ್ಸುಕರಾಗಿದ್ದಾರೆ ಎಂದರು. ಗ್ರಾಪಂ ಸದಸ್ಯ ನಾರಾಯಣಸ್ವಾಮಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಡಿ.ಮಂಜುನಾಥ್, ಮುಖಂಡರಾದ ಸುಬ್ಬಣ್ಣ, ಸಮೂಹ ಸಂಪನ್ಮೂಲ ವ್ಯಕ್ತಿ ಜಿ.ವಿ. ಗಂಗಾಧರ್, ಶಾಲಾ ಸಹ ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ, ಕೆ.ಸೊಣ್ಣೇಗೌಡ, ಎಂ.ಮುನಿಯಪ್ಪ, ಕೆ.ಮಮತಾ, ಅಂಗನವಾಡಿ ಸಹಾಯಕಿ ಚೌಡಮ್ಮ ಉಪಸ್ಥಿತರಿದ್ದರು.ಮನೆ ಮನೆ ಭೇಟಿ ಮತ್ತು ಜಾಥಾ ಮೂಲಕ ಗ್ರಾಮದಲ್ಲಿ ಜಾಗೃತಿ ಜತೆಗೆ ವಿದ್ಯಾರ್ಥಿ ಸಾರಿಕಾ ಮತ್ತು ಹರ್ಷಿತ್ ಅವರನ್ನು ಆಂಗ್ಲ ಮಾಧ್ಯಮಕ್ಕೆ ದಾಖಲಾತಿ ಮಾಡಲಾಯಿತು.
ಗ್ರಾಮ ಪಂಚಾಯಿತಿ ಕೇಂದ್ರದ ಸರ್ಕಾರಿ ಹಿರಿಯ ಮತ್ತು ಪ್ರೌಢಶಾಲೆಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಸೂಚನೆಯಂತೆ ಆಯಾ ಮುಖ್ಯಶಿಕ್ಷಕರು ಕ್ರಿಯಾ ಯೋಜನೆ ತಯಾರು ಮಾಡಿ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಶಾಲೆಗಳು ಚಟುವಟಿಕೆ ಆಧಾರಿತ ಆಕರ್ಷಕ ಕೇಂದ್ರಗಳಾಗುತ್ತದೆ. ಡಿ.ನಾಗರಾಜ್, ಗ್ರಾಪಂ ಪಿಡಿಒ