ನ್ಯೂಸ್

ಜಿಲ್ಲೆಯ 14 ಉಪ ನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರ ದಾಳಿ

ಜಿಲ್ಲೆಯ 14 ಉಪ ನೋಂದಣಿ ಕಚೇರಿ ಮೇಲೆ ಬುಧವಾರ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ನಡೆಸಿದ್ದಾರೆ. ಮಧ್ಯಾಹ್ನ 12 ಗಂಟೆ ಸುಮಾರಿಗೆ ಎಲ್ಲ ಕಚೇರಿಗಳಿಗೆ ಆಗಮಿಸಿದ ಲೋಕಾಯುಕ್ತ ಪೊಲೀಸರ ತಂಡ ಅಲ್ಲಿನ ದಾಖಲಾತಿಗಳು ಹಾಗೂ ಸಿಬ್ಬಂದಿಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಸಂಜೆ 5.30ರ ವರೆಗೂ ಪರಿಶೀಲನಾ ಕಾರ್ಯ ನಡೆದಿದ್ದು, ಈ ವೇಳೆ ಕಚೇರಿಯಲ್ಲಿ ಯಾವುದೇ ಹಣಕಾಸು ಅಥವ ಕಡತಗಳನ್ನು ವಶಕ್ಕೆ ಪಡೆದಿಲ್ಲ ಎಂದು ತಿಳಿದು ಬಂದಿದೆ. ಈ ವೇಳೆ ಕಚೇರಿಯಲ್ಲಿ ಹಾಜರಿದ್ದ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ.

ಮೈಸೂರು ನಗರದ ರಾಮಕೃಷ್ಣನಗರದಲ್ಲಿರುವ ದಕ್ಷಿಣ, ತಾಲೂಕು ಕಚೇರಿಯಲ್ಲಿರುವ ಉತ್ತರ, ವಿಜಯನಗರದಲ್ಲಿರುವ ಪೂರ್ವ, ಡಾ.ರಾಜಕುಮಾರ್ ರಸ್ತೆಯಲ್ಲಿ ಇರುವ ಪಶ್ಚಿಮ, ಮುಡಾ ಕಚೇರಿ ಆವರಣದಲ್ಲಿ ಇರುವ ಕಚೇರಿ, ಕೆ.ಆರ್.ನಗರ, ಹುಣಸೂರು, ಎಚ್.ಡಿ.ಕೋಟೆ, ನಂಜನಗೂಡು, ಪಿರಿಯಾಪಟ್ಟಣ, ತಿ.ನರಸೀಪುರದ ಉಪ ನೋಂದಣಿ ಕಚೇರಿಗಳಲ್ಲಿಯೂ ಸಹ ಪರಿಶೀಲನೆ ನಡೆಸಲಾಗಿದೆ.