ನ್ಯೂಸ್

ಜಿಲ್ಲೆಗೆ ವಿಶೇಷ ಪ್ಯಾಕೇಜ್

ಹನೂರು: ಚಾಮರಾಜನಗರ ಜಿಲ್ಲೆಗೆ ಇನ್ನೆರೆಡು ದಿನಗಳಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತಿಳಿಸಿದರು.
ಮಹದೇಶ್ವರ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಈಗಾಗಲೇ ವರದಿ ನೀಡಿದ್ದಾರೆ. ಈ ದಿಸೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು ಎಂದರು. ಎನ್‌ಎಚ್‌ಎಂ ಗುತ್ತಿಗೆ ನೌಕರರ ಪ್ರತಿಭಟನೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಗುತ್ತಿಗೆ ನೌಕರರಿಗೆ ಯಾವ ಸಹಾಯ ಮಾಡಲಾಗುವುದೋ ಅದನ್ನು ಮಾಡುತ್ತೇನೆ. ಈ ಸಂಬಂಧ ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇನ್ನು ಮೈಸೂರು ಎಕ್ಸ್‌ಪ್ರೆಸ್ ವೇ ಇಡೀ ದೇಶವೇ ಮೈಸೂರಿಗೆ ಕನೆಕ್ಟ್ ಆಗಲಿದ್ದು, ದೇಶವೇ ಹೆಮ್ಮೆ ಪಡುವಂತಹ ವಿಚಾರ. ಇಂತಹ ಮಹತ್ವದ ಅಭಿವೃದ್ಧಿ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಕರೆಸದೇ ಬೇರೆ ಯಾವುದಕ್ಕೆ ಕರೆಸಬೇಕು? ಮೊದಲ ಮಳೆ ಬಂದ ಬಳಿಕ ಸಣ್ಣಪುಟ್ಟ ಸಮಸ್ಯೆ ಅನಿವಾರ್ಯ. ಆದರೆ ಶೀಘ್ರವೇ ಎಲ್ಲ ಸಮಸ್ಯೆ ನಿವಾರಣೆಯಾಗಲಿದೆ ಎಂದು ವಿಪಕ್ಷಗಳ ಟೀಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಬಿಎಸ್‌ವೈ ಗೈರು: ಪ್ರತಿಮೆ ಲೋಕಾರ್ಪಣೆ ಹಾಗೂ ವಿವಿಧ ಅಭಿವೃದ್ಧಿ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದು, ಆಹ್ವಾನ ಪತ್ರಿಕೆಯಲ್ಲಿ ಹೆಸರನ್ನು ಹಾಕಲಾಗಿತ್ತು. ಆದರೆ ಅವರು ಗೈರಾಗಿದ್ದರು. ಹಾಗಾಗಿ ಬಿಜೆಪಿ ಒಗ್ಗಟ್ಟಿನ ಶೋ ಆಗಲಿದೆ ಎಂಬುದು ಸುಳ್ಳಾಗಿ ಕೇವಲ ಮುಖ್ಯಮಂತ್ರಿ ಹಾಗೂ ಸೋಮಣ್ಣ ಅವರ ಸಮ್ಮಿಲನದ ಕಾರ್ಯಕ್ರಮವಾಯಿತು. ಬಿಎಸ್‌ವೈ ಹಾಗೂ ಸೋಮಣ್ಣ ನಡುವೆ ಇದೆ ಎನ್ನಲಾದ ಮುಸುಕಿನ ಗುದ್ದಾಟ ಮ.ಬೆಟ್ಟದ ಕಾರ್ಯಕ್ರಮದಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಕಾರ್ಯಕ್ರಮಕ್ಕೆ ಬಿಎಸ್‌ವೈ ಗೈರಾಗಿದ್ದರು. ಚಿಕ್ಕಮಗಳೂರಿನಲ್ಲಿ ನಡೆಯುವ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಬೇಕಿದ್ದರಿಂದ ಇಂದಿನ ಕಾರ್ಯಕ್ರಮಕ್ಕೆ ಬಿಎಸ್‌ವೈ ಗೈರಾಗಿದ್ದರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.