ನ್ಯೂಸ್

ಜಿಲ್ಲಾಧಿಕಾರಿಗೆ ದಾಖಲೆ ಸಲ್ಲಿಕೆ

ಹುಣಸೂರು: ತಾಲೂಕಿನ ರತ್ನಪುರಿ 1 ಮತ್ತು ರತ್ನಪುರಿ 2 ಚೌಡಿಕಟ್ಟೆ ಮಾಜಿ ಸೈನಿಕರ ಕಾಲನಿಗಳಲ್ಲಿ ಮಾಜಿ ಸೈನಿಕರಿಗೆ ಮೀಸಲಾದ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಿರುವ ರೈತರೊಂದಿಗೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಸಭೆ ನಡೆಸಿದರು.


ಸೆ.12ರಂದು ‘ವಿಜಯವಾಣಿ’ ಪತ್ರಿಕೆಯಲ್ಲಿ ಮತ್ತಷ್ಟು ಬಿಗಡಾಯಿಸಿದ ಭೂ ಹೋರಾಟ ಶೀರ್ಷಿಕೆಯಡಿ ಮಾಜಿ ಸೈನಿಕರ ಕಾಲನಿಯಲ್ಲಿ ಮಾಜಿ ಸೈನಿಕರು ಮತ್ತು ರೈತರ ನಡುವೆ ಸಂಘರ್ಷ ತಂದಿಟ್ಟಿರುವ ಭೂವಿವಾದ ಕುರಿತಂತೆ ಪ್ರಕಟವಾದ ವಿಶೇಷ ವರದಿ ಪರಿಣಾಮ ತಾಲೂಕು ಆಡಳಿತ ಮಾಜಿ ಸೈನಿಕರ ಕಾಲನಿಯಲ್ಲಿ ಉಳುಮೆ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಅವರಿಂದ ದಾಖಲೆಗಳನ್ನು ಪಡೆಯಲು ಮುಂದಾಯಿತು.


ಈ ವೇಳೆ ಮಾತನಾಡಿದ ತಹಸೀಲ್ದಾರ್, ಮಾಜಿ ಸೈನಿಕರಿಗೆ ಮೀಸಲಾಗಿರುವ ಭೂಮಿಯಲ್ಲಿ ಒತ್ತುವರಿ ಮಾಡಿಕೊಂಡು ಕೃಷಿಕಾರ್ಯ ನಡೆಸುತ್ತಿರುವ ರೈತರನ್ನು ಒಕ್ಕಲೆಬ್ಬಿಸಲು ಹೈಕೋರ್ಟ್ ನೀಡಿರುವ ಆದೇಶದ್ವನಯ 193ಕ್ಕೂ ಹೆಚ್ಚು ರೈತರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದರು.


ಈ ಹಿಂದೆ 1996ರ ಅವಧಿಯಲ್ಲಿ 50ಕ್ಕೂ ಹೆಚ್ಚು ಜನರಿಗೆ ಸಾಗುವಳಿ ಪತ್ರ ನೀಡಲಾಗಿದೆ. ಅದನ್ನು ಹೊರತುಪಡಿಸಿ ಸರ್ಕಾರ ಅಕ್ರಮವಾಗಿ ಕೃಷಿಕಾರ್ಯ ನಡೆಸುತ್ತಿದ್ದಾರೆ ಎಂದು ಗುರುತಿಸಿರುವ ರೈತರಿಂದ ಅವರಲ್ಲಿ ಪೂರಕ ದಾಖಲೆಗಳಿದ್ದರೆ ಅದನ್ನು ಪಡೆಯಲು ಮುಂದಾಗಿದೆ. ಹಾಗಾಗಿ ರೈತರು ಈ ಹಿಂದೆ ಫಾರಂ ನಂ.50 ಅಥವಾ 53ರಲ್ಲಿ ಅರ್ಜಿ ಸಲ್ಲಿಸಿ ಅದು ತಿರಸ್ಕೃತವಾಗಿದ್ದರೆ, ಭೂಮಿ ಖರೀದಿಸಿದ್ದರೆ ಅಥವಾ ಇನ್ಯಾವುದೇ ವ್ಯಾವಹಾರಿಕ ಚಟುವಟಿಕೆಗಳು ನಡೆದಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ. ಈ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು ಎಂದರು.


ರೈತ ಮುಖಂಡರಾದ ಕನಕರಾಜು, ರಮೇಶ್, ದೇವೇಗೌಡ, ಗ್ರಾಮಲೆಕ್ಕಿಗರು, ಕಂದಾಯ ಅಧಿಕಾರಿಗಳು ಇದ್ದರು.