ನ್ಯೂಸ್

ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾ.21ರಿಂದ ಏ.4 ರವರೆಗೆ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾ.21ರಿಂದ ಏ.4 ರವರೆಗೆ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ -1 ನಡೆಸುತ್ತಿದ್ದು, ಸುಗಮ ಪರೀಕ್ಷೆಯನ್ನು ನಡೆಸಲು ಜಿಲ್ಲಾದ್ಯಂತ 133 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ನಗರದಲ್ಲಿ 35, ಗ್ರಾಮೀಣ ಪ್ರದೇಶದಲ್ಲಿ 98 ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಸರ್ಕಾರಿ ಶಾಲೆ, ಅನುದಾನಿತ ಶಾಲೆ ಹಾಗೂ ಅನುದಾನರಹಿತ ಶಾಲೆಗಳಲ್ಲೂ ಪರೀಕ್ಷಾ ಕೇಂದ್ರಗಳಿವೆ. ಈ ಬಾರಿ ಜಿಲ್ಲೆಯಲ್ಲಿ 37,904 ಮಕ್ಕಳು ಪರೀಕ್ಷೆ ಎದುರಿಸುತ್ತಿದ್ದಾರೆ. 465 ಖಾಸಗಿ, 734 ಪುನರಾವರ್ತಿತರೂ ಸೇರಿದಂತೆ 39,103 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಅವರಲ್ಲಿ 19,114 ಬಾಲಕಿಯರಿದ್ದಾರೆ. ಜಿಲ್ಲಾಧಿಕಾರಿ ಸೇರಿ 633 ಸಿಬ್ಬಂದಿ ಸಜ್ಜಾಗಿದ್ದಾರೆ. ರಾಜ್ಯದಾದ್ಯಂತ ಮಾ.21 ರಿಂದ ಪರೀಕ್ಷೆ ಆರಂಭವಾಗಲಿದ್ದು, ಜಿಲ್ಲೆಯಲ್ಲಿಯೂ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ವಿದ್ಯಾರ್ಥಿಸ್ನೇಹಿಯಾಗಿ ಪರೀಕ್ಷೆಯನ್ನು ನಡೆಸಲು ಸಿಬ್ಬಂದಿ ಸಜ್ಜಾಗಿದ್ದಾರೆ. ಪರೀಕ್ಷಾ ಅಕ್ರಮವನ್ನು ತಡೆಯಲು, ಪ್ರಶ್ನೆ ಪತ್ರಿಕೆಗಳನ್ನಿಡುವ ಸ್ಟ್ರಾಂಗ್ ರೂಮ್, ಕಾರಿಡಾರ್‌ಗಳು ಮಾತ್ರವಲ್ಲದೇ ಪ್ರತಿ ಪರೀಕ್ಷಾ ಕೊಠಡಿಗೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಸ್ಟರ್ ರೂಮ್ ಸ್ಥಾಪಿಸಿ ಪರಿಶೀಲನೆಗೆ ತಯಾರಿ ಮಾಡಲಾಗಿದೆ. ಪ್ರಥಮ ಭಾಷೆಯೊಂದಿಗೆ ಆರಂಭವಾಗುವ ಪರೀಕ್ಷೆಯು ಏ.4ರಂದು ತೃತೀಯ ಭಾಷೆಯೊಂದಿಗೆ ಮುಕ್ತಾಯವಾಗಲಿದೆ. ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಪರೀಕ್ಷೆ ನಡೆಯಲಿದೆ. ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಲು ತಾಲೂಕು ಮಟ್ಟದಲ್ಲಿ ಮಾರ್ಗಗಳನ್ನು ನಿಗದಿಪಡಿಸಲಾಗಿದೆ. ಎಲ್ಲ ಮಾರ್ಗಗಳಲ್ಲೂ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಸಂಚರಿಸಲಿದ್ದಾರೆ. ಕೇಂದ್ರಗಳಲ್ಲಿ ಮುಖ್ಯ ಸೂಪರಿಟೆಂಡೆಂಟ್ ಸೇರಿದಂತೆ ಕೊಠಡಿಗಳಿಗೆ ಅನುಗುಣವಾಗಿ ಸಿಬ್ಬಂದಿ ನಿಯೋಜಿಸ ಲಾಗಿದೆ ಎಂದು ಡಿಡಿಪಿಐ ಎಸ್.ಟಿ.ಜವರೇಗೌಡ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ ಲಭ್ಯವಿರಲಿದ್ದಾರೆ. ಕುಡಿಯುವ ನೀರು ಲಭ್ಯತೆ, ಶೌಚಗೃಹ ವ್ಯವಸ್ಥೆ ಸುಸ್ಥಿತಿಯಲ್ಲಿಡಲು ಸೂಚಿಸಲಾಗಿದೆ. ಪ್ರತಿ ಬ್ಲಾಕ್‌ವಾರು ಫ್ಲೈಯಿಂಗ್ ಸ್ಕ್ವಾಡ್ ರಚನೆಯಾಗಿದ್ದು, ಪರೀಕ್ಷಾ ಅಕ್ರಮಗಳು ಜರುಗದಂತೆ ಕ್ರಮ ವಹಿಸಲಾಗುತ್ತಿದೆ.

200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಪರೀಕ್ಷಾ ಕೇಂದ್ರಗಳಲ್ಲಿ ಅಧಿಕಾರಿ/ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ನಿಷೇಧಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಯುವ ದಿನಗಳಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಪ್ರಶ್ನೆಪತ್ರಿಕೆ ತೆರೆಯುವ ಪರೀಕ್ಷಾ ಕೇಂದ್ರದ ಮುಖ್ಯಅಧೀಕ್ಷಕರ ಕೊಠಡಿ ಮತ್ತು ಕಾರಿಡಾರ್‌ನಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲಾ ಮಟ್ಟದ ಪರೀಕ್ಷಾ ವಿಚಕ್ಷಣಾ ದಳ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ವಿಚಕ್ಷಣಾ ಜಾಗೃತ ದಳದ ಅಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲಾಧಿಕಾರಿಗಳ ಹಂತದಲ್ಲಿ ವಿಚಕ್ಷಣಾ ಜಾಗೃತದಳ ನೇಮಿಸಲು ತಿಳಿಸಲಾಗಿದೆ. ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

ಎಲ್ಲ ತಾಲೂಕಿನಲ್ಲಿ ವಾಹನ ಸೌಲಭ್ಯ

ಪರೀಕ್ಷಾ ಪ್ರವೇಶಪತ್ರವನ್ನು ತೋರಿಸಿ ವಿದ್ಯಾರ್ಥಿಗಳು ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಸ್ ಲಭ್ಯತೆ ಇಲ್ಲದ ಪ್ರದೇಶದಿಂದ ಮಕ್ಕಳನ್ನು ಕರೆತರಲು ಮುಖ್ಯಶಿಕ್ಷಕರು ಹಾಗೂ ಎಸ್‌ಡಿಎಂಸಿ ಜಂಟಿಯಾಗಿ ವಾಹನದ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಪ್ರತಿ ತಾಲೂಕು ಹಂತದಲ್ಲಿ ಸಹಾಯವಾಣಿ ತೆರೆಯಲಾಗಿದೆ.

5ನೇ ಸ್ಥಾನದೊಳಗೆ ತರುವ ಗುರಿ

ಕಳೆದ ಬಾರಿ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ 7ನೇ ಸ್ಥಾನವನ್ನು ಪಡೆದಿತ್ತು. ಈ ಬಾರಿ 5ರೊಳಗೆ ತರುವ ಗುರಿ ಇದೆ. ಕಲಿಕೆಯನ್ನು ಉತ್ತಮಪಡಿಸಲು ಹಲವು ಪ್ರಯತ್ನಗಳನ್ನು ಮಾಡಲಾಗಿದೆ. ಕಲಿಕೆಯಲ್ಲಿ ಹಿಂದುಳಿದವರಿಗೆ 40 ಅಂಕಗಳ ಪಾಸಿಂಗ್ ಪ್ಯಾಕೇಜ್ ಕೈಪಿಡಿಯ ಸಾಫ್ಟ್ ಕಾಪಿಗಳನ್ನು ಒದಗಿಸಲಾಗಿದೆ. ಕಲಿಕಾಮೃತ ಹೆಸರಿನಲ್ಲಿ ತರಬೇತಿ ನೀಡಲಾಗಿದೆ ಎಂದು ಡಿಡಿಪಿಐ ಎಸ್.ಟಿ. ಜವರೇಗೌಡ ತಿಳಿಸಿದ್ದಾರೆ.

ನಗರದಲ್ಲಿ 35, ಗ್ರಾಮೀಣ ಪ್ರದೇಶದಲ್ಲಿ 98 ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 133 ಪರೀಕ್ಷಾ ಕೇಂದ್ರಗಳಿದ್ದು, 465 ಖಾಸಗಿ, 734 ಪುನರಾವರ್ತಿತರೂ ಸೇರಿದಂತೆ 39,103 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ನಡೆದು, ಜಿಲ್ಲೆಯ ಫಲಿತಾಂಶ ಮಟ್ಟವನ್ನು ಮೇಲು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ವಹಿಸಲಾಗಿದೆ. ಎಸ್.ಟಿ. ಜವರೇಗೌಡ ಉಪನಿರ್ದೇಶಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ