ನ್ಯೂಸ್

ಜಿಲ್ಲಾ ವಾರ್ಷಿಕ ಪೊಲೀಸ್ ಕ್ರೀಡಾಕೂಟ ಆರಂಭ

ಚಿತ್ರದುರ್ಗ: ಕಳೆದ ಡಿಸೆಂಬರ್‌ನಲ್ಲಿ ನಡೆಯಬೇಕಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಮೂರು ದಿನಗಳ ಕಾಲ ನಡೆಯುವ ಕ್ರೀಡಾಕೂಟವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ.ಪ್ರೇಮಾವತಿ ಮನಗೂಳಿ ಉ ದ್ಘಾಟಿಸಿ ಮಾತನಾಡಿದರು.
ಕರ್ತವ್ಯಕ್ಕೆ ಸಂಬಂಧಿಸಿದಂತೆ ನಿತ್ಯವೂ ಒಂದಲ್ಲ,ಒಂದು ಜವಾಬ್ದಾರಿಗಳನ್ನು ನಿರ್ವಹಿಸುತ್ತಾ,ತಮ್ಮ ವೈಯಕ್ತಿಕ ಸಂತೋಷಗಳಿಂದ ದೂರ ವುಳಿಯುವ ಪೊಲೀಸರಿಗೆ ತಮ್ಮದೊಂದು ಸೆಲ್ಯೂಟ್ ಎಂದು ಮನದುಂಬಿ ಪೊಲೀಸರ ಸೇವೆಯನ್ನು ಶ್ಲಾಘಿಸಿದ ನ್ಯಾಯಾಧೀಶರು,ಕ್ರೀಡೆ ದೈಹಿಕ,ಮಾನಸಿಕ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ನಾಯಕತ್ವ ಗುಣವನ್ನೂ ರೂಢಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್ಪಿ.ಜಿ.ರಾಧಿಕಾ ಮಾತನಾಡಿ,ಕರೊನಾ ಕಾರಣದಿಂದಾಗಿ ಈಗ ಕ್ರೀಡಾಕೂಟವನ್ನು ಸರಳವಾಗಿ ಆಯೋಜಿಸಲಾಗುತ್ತಿದೆ. ತಾವು ಜಿಲ್ಲೆ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅಂದಿನಿಂದಲೂ ಆ ಟೋಟಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. ಸೋಲು ಗೆಲುವು ಎನ್ನುವುದಕ್ಕಿಂತ ಕ್ರೀಡಾಕೂಟದಲ್ಲಿ ಎಲ್ಲರೂ ಸಂತೋಷದಿಂದ ಭಾಗ ವಹಿಸುವುದು ಮುಖ್ಯ. ಇದರಿಂದ ದೈನಂದಿನ ಕರ್ತವ್ಯದ ನಡುವೆ ಪೊಲೀಸ್‌ರಿಗೆ ಬಿಗ್ ಬ್ರೇಕ್ ಸಿಕ್ಕಂತಾಗುತ್ತದೆ ಎಂದರು. ಎಎಸ್ಪಿ ಎಂ.ಬಿ.ನಂದಗಾವಿ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲ ಪಾಪಣ್ಣ ಮತ್ತಿತರರು ಹಿರಿಯ ಅಧಿಕಾರಿಗಳಿದ್ದರು.