ನ್ಯೂಸ್

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿ / ಆಸ್ಪತ್ರೆ ಆವರಣವನ್ನು ಸ್ವಚ್ಛಗೊಳಿಸಿ / ಜಿಲ್ಲಾಧಿಕಾರಿ ಅಕ್ರಂಪಾಷ

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ತಿಳಿಸಿದರು.

ನಗರದ ಶ್ರೀ ನರಸಿಂಹರಾಜು ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಶುಕ್ರವಾರ ೨೦೨೩-೨೪ನೇ ಸಾಲಿನ ಆರೋಗ್ಯ ರಕ್ಷಾ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಆಸ್ಪತ್ರೆಯ ಒಳ ಮತ್ತು ಹೊರ ಆವರಣದಲ್ಲಿ ಶುಚಿಯಾಗಿಡಲು ಹೆಚ್ಚಿನ ಆದ್ಯತೆ ನೀಡಿ ಎಂದು ಸೂಚಿಸಿದರು.

ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಕುಡಿಯುವ ನೀರು, ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಹಾಗೂ ಶೌಚಾಲಯ ಮತ್ತು ಕುಳಿತು ವಿಶ್ರಮಿಸಿಕೊಳ್ಳಲು ಅಗತ್ಯ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ಆರೋಗ್ಯ ಕೇಂದ್ರಕ್ಕೆ ಬರುವ ಆಂಬುಲೆನ್ಸ್ ವಾಹನಗಳಿಗೆ ದಾರಿಯನ್ನು ಕಲ್ಪಿಸಿಕೊಡಲು ಸೂಚಿಸಿದರು.

ಆಸ್ಪತ್ರೆಯ ವಿವಿಧ ಭಾಗಗಳಲ್ಲಿ ಹಾಗೂ ಆಕ್ಸಿಜನ್ ಘಟಕಗಳಿಗೆ ಅಗ್ನಿಶಾಮಕ ಸಲಕರಣೆಗಳು ಮತ್ತು ಭದ್ರತಾ ದೃಷ್ಟಿಯಿಂದ ಮತ್ತು ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಲಿಫ್ಟ್ಗಳನ್ನು ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ನೀರಿನ ಪೈಪ್ ಲೈನ್‌ಗಳು ದುರಸ್ತಿಗೊಳಿಸಬೇಕು. ನೀರಿನ ಅಭಾವವಿರುವುದರಿಂದ ಆಸ್ಪತ್ರೆಯ ಆವರಣದಲ್ಲಿ ಬೋರ್ವೆಲ್ ಕೊರೆಸಲು ನಗರಸಭೆ ಆಯುಕ್ತ ಶಿವಾನಂದ್‌ರವರಿಗೆ ತಿಳಿಸಿದರು.

ಆಸ್ಪತ್ರೆಯಲ್ಲಿ ವಸತಿಗೃಹಗಳ ದುರಸ್ತಿ ಹಾಗೂ ನವೀಕರಣಗೊಳಿಸಲು ೮ ದಿನಗಳೊಳಗಾಗಿ ಕ್ರಿಯಾ ಯೋಜನೆ ತಯಾರಿಸಲು ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿ, ವರದಿ ಸಲ್ಲಿಸುವಂತೆ ಸೂಚಿಸಿದರು.

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಹಳೆಯ ವಾಹನಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯ ಆವರಣದಲ್ಲಿರುವ ಹಳೆ ವಾಹನಗಳ ಪಟ್ಟಿಯನ್ನು ೨ ದಿನಗಳಲ್ಲಿ ನೀಡುವಂತೆ ತಿಳಿಸಿದರು.

ಆಸ್ಪತ್ರೆಯ ಆವರಣದಲ್ಲಿ ಸಾರ್ವಜನಿಕರಿಗೆ, ರೋಗಿಗಳಿಗೆ, ಸಿಬ್ಬಂದಿಯವರಿಗೆ ಅನುಕೂಲವಾಗುವಂತೆ ಊಟದ ವ್ಯವಸ್ಥೆಗಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲು ನಗರಸಭೆಯ ಆಯುಕ್ತರ ಸಮ್ಮುಖದಲ್ಲಿ ಸ್ಥಳವನ್ನು ವೀಕ್ಷಿಸಿ, ಶೀಘ್ರದಲ್ಲಿ ಕಟ್ಟಡ ನಿರ್ಮಿಸಲು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ: ಎಸ್ ಎನ್ ವಿಜಯಕುಮಾರ್, ಜಿಲ್ಲಾ ಪಂಚಾಯತ್, ಮಾನಸಿಕ ಆರೋಗ್ಯ ಅಧಿಕಾರಿಯಾದ ಡಾ. ನಾರಾಯಣಸ್ವಾಮಿ, ಕಾರ್ಯದರ್ಶಿಗಳಾದ ಶಿವಕುಮಾರ್, ಐ ಎಂ ಎ ಜಿಲ್ಲಾ ಅಧ್ಯಕ್ಷ ಡಾ: ನಾರಾಯಣಸ್ವಾಮಿ, ನಗರ ಸಭೆ ಆಯುಕ್ತ ಶಿವಾನಂದ, ಜಿಲ್ಲಾಸ್ಪತ್ರೆಗೆ ಸಂಬAಧಪಟ್ಟ ಎಲ್ಲಾ ವೈದ್ಯರು ಇದ್ದರು.

ಚಿತ್ರ ೨೨ ಕೆ.ಎಲ್.ಆರ್ ೦೧ : ಜಿಲ್ಲಾ ಆಸ್ಪತ್ರೆಯ ಸಭಾಂಗಣದಲ್ಲಿ ಆರೋಗ್ಯ ರಕ್ಷಾ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ, ಡಾ: ಎಸ್ ಎನ್ ವಿಜಯಕುಮಾರ್, ಡಾ. ನಾರಾಯಣಸ್ವಾಮಿ ಇದ್ದರು.