ನ್ಯೂಸ್

ಜಾಹೀರಾತು ಬೈಲಾ ಅಧಿಸೂಚನೆಗೆ ನ್ಯಾಯಲಯದ ಅನುಮತಿ ಕಡ್ಡಾಯ: ಹೈಕೋರ್ಟ್

ಬೆಂಗಳೂರು: ನ್ಯಾಯಾಲಯದ ಅನುಮತಿ ಇಲ್ಲದೆ ಪ್ರಸ್ತಾವಿತ ಬಿಬಿಎಂಪಿ ಜಾಹೀರಾತು ಬೈಲಾ 2024 ಅನ್ನು (ಫ್ಲೆಕ್ಸ್, ಹೋರ್ಡಿಂಗ್ಸ್‌ಗಳ) ಅಧಿಸೂಚನೆ ಹೊರಡಿಸದಂತೆ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ಪಾಲಿಕೆಗೆ ಸೂಚನೆ ನೀಡಿದೆ.

ಬೆಂಗಳೂರು ನಗರ ಪ್ರದೇಶದಲ್ಲಿ ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ನಗರದಲ್ಲಿ ಜಾಹೀರಾತು ಅಳವಡಿಕೆ ಕುರಿತಾಗಿ ಬೈಲಾ ನಿಯಮಗಳನ್ನು ತಿದ್ದುಪಡಿ ಮಾಡುವುದಕ್ಕೆ ಬಿಬಿಎಂಪಿ ನಿರ್ಧರಿಸಿದ್ದು, ಪ್ರಕ್ರಿಯೆ ನಡೆಯುತ್ತದೆ.

ಈ ಬಗ್ಗೆ ಸಾರ್ವಜನಿಕರೂ ಆಕ್ಷೇಪಣೆ ಸಲ್ಲಿಸಿದ್ದು, ಸಂಬಂಧಪಟ್ಟವರು ಮತ್ತು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ ಎಂದು ಪೀಠಕ್ಕೆ ವಿವರಿಸಿದರು.

ಸರ್ಕಾರದ ಪರ ವಾದ ಮಂಡಿಸಿದ ವಕೀಲರು, ಸರ್ಕಾರದ ಅನುಮತಿ ಪಡೆದ ಬಳಿಕ ಬೈಲಾದ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ನಗರದಲ್ಲಿ ಅಳವಡಿಸಲಾಗಿರುವ ಅನಧೀಕೃತ ಫ್ಲೆಕ್ಸ್ , ಹೋರ್ಡಿಂಗ್ಸ್ ಮತ್ತು ಜಾಹೀರಾತುಗಳನ್ನು ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಹೀಗಾಗಿ ಈ ಸಂಬಂಧ ಅಧಿಸೂಚನೆ ಹೊರಡಿಸಬೇಕಾದರೂ ನ್ಯಾಯಾಲಯದ ಅನುಮತಿ ಪಡೆಯಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ನ.8ಕ್ಕೆ ಮುಂದೂಡಿತು.